ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಕಲೆ ಪ್ರೋತ್ಸಾಹಿಸುವ ಕಾರ್ಯ ಆಗಬೇಕು

12
Published on

ಮೈಸೂರು: ವಿದೇಶದಲ್ಲಿ ಇರುವಂತೆ ನಮ್ಮ ದೇಶದಲ್ಲಿಯೂ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಕಲೆ ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದು ಪ್ರಜ್ಞಾ ಟ್ರಸ್ಟ್ ಅಧ್ಯಕ್ಷ, ಕರಾಟೆ ಪಟು ಸೋಸಲೆ ಸಿದ್ದರಾಜು ಅಭಿಪ್ರಾಯಪಟ್ಟರು.

ಮೈಸೂರು ತಾಲೂಕು ಡಿ.ಸಾಲುಂಡಿಯ ಸ್ಯಾಂಡಲ್ ರೋಸ್ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದೇಶಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಯಾವ ಕಲೆಯಲ್ಲಿ ಆಸಕ್ತಿ ಇದೆ ಎನ್ನುವುದನ್ನು ಗುರುತಿಸಿ ಅಂತಹ ಕಲೆಯನ್ನು ಹೆಚ್ಚು ಕಲಿಸಲಾಗುತ್ತದೆ. ಈ ಮೂಲಕ ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಹಾಗೆ ತರಬೇತಿ ನೀಡುತ್ತಾರೆ. ಹಾಗೆಯೇ ನಮ್ಮ ಮಕ್ಕಳಲ್ಲಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದರಲ್ಲಿ ಹೆಚ್ಚಿನ ತರಬೇತಿಯನ್ನು ನೀಡಿದರೆ ದೇಶಕ್ಕೂ ಒಳಿತು ಎಂದು ಹೇಳಿದರು.

ಎಲ್ಲ ಮಕ್ಕಳು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ಆ ನಿಟ್ಟಿನಲ್ಲಿ ಸದೃಢ ದೇಹದ ಜತೆಗೆ ಸದೃಢ ಮನಸ್ಸನ್ನು ಹೊಂದುತ್ತದೆ ಎಂದು ಕ್ರೀಡೆಯ ಮಹತ್ವವನ್ನು ತಿಳಿಸಿದರು.

ಹಿಮಾಲಯ ಪರ್ವತಾರೋಹಿಣಿಯಾದ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಡಾ.ಉಷಾ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳೆಲ್ಲರೂ ಪ್ರತಿದಿನ ವ್ಯಾಯಾಮ ಯೋಗವನ್ನು ಮಾಡುವುದರ ಮೂಲಕ ದೈಹಿಕ ದೃಢತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳೊಂದಿಗೆ ತಮ್ಮ ಪರ್ವತಾರೋಹಣ ಅನುಭವ ಹಂಚಿಕೊಳ್ಳುತ್ತಾ, ತಮಗೆ ಎದುರಾದ ಅಪಾಯಗಳನ್ನು ದಾಟಿ ವಿಶ್ವದ ಎತ್ತರವಾದ ಶಿಖರವಾದ ಮೌಂಟ್ ಎವರೆಸ್ಟ್ ಏರಿದ ಬಗ್ಗೆ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಶಾಲಾ ಆಡಳಿತ ಮಂಡಳಿಯ ಬಿ.ಶೋಭಾ , ಎಂ.ಶಿವರಾಜು, ಮುಖ್ಯ ಶಿಕ್ಷಕ ಪಿ. ಮದನ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net