

ಲಿಂಗಸುಗೂರು: ಮಹಿಳೆಯರು, ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ಅಪರಾಧ ಪ್ರಕರಣಗಳ ತಡೆಗೆ ಪೊಲೀಸ್ ಇಲಾಖೆಯಿಂದ ಶೀಘ್ರ ದೂರು ಪೆಟ್ಟಿಗೆ ಅಳವಡಿಸಲಾಗುವುದು ಎಂದು ಸಿಪಿಐ ಮಹಾಂತೇಶ ಸಜ್ಜನ್ ಹೇಳಿದರು.
ಪಟ್ಟಣದ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವವರ ಹೆಸರು ದೂರು ಪೆಟ್ಟಿಗೆಯಲ್ಲಿ ಹಾಕಿದರೆ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ದ್ವಿಚಕ್ರ ಅಥವಾ ಇತರ ವಾಹಗಳಿಗೆ ಕಡ್ಡಾಯವಾಗಿ ಇನ್ಶುರೆನ್ಸ್ ಮಾಡಿಸಬೇಕೆಂದು ಹೇಳಿದರು.
ಪಿಎಸ್‌ಐ ಪ್ರಕಾಶರಡ್ಡಿ ಡಂಬಳ ಮಾತನಾಡಿ, ವಿದ್ಯಾರ್ಥಿಗಳು ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರ್ ಚಾಲಕರು ಸೀಟ್‌ಬೆಲ್ಟ್ ಹಾಕಿಕೊಳ್ಳಬೇಕು. ರಸ್ತೆ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರು.
ಪ್ರಾಚಾರ್ಯ ಬಸವರಾಜ ಮೇಟಿ, ಉಪನ್ಯಾಸಕ ಕಣ್ಮೇಶ ಚಿತ್ತಾಪುರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.