

ರಾಮನಗರದಲ್ಲಿ ಅಂಗವಿಕಲ ಮಕ್ಕಳ ಶಾಲಾ ಸಿದ್ಧತಾ ಕೇಂದ್ರ ಸ್ಥಾಪನೆ
ರಾಮನಗರ: ಸ್ಥಳಿಯ ಕಂಪನಿಗಳ ಸಿಎಸ್ಆರ್ ಹಣವನ್ನು ಹೆಚ್ಚಾಗಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗುತ್ತಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.
ರಾಮನಗರದ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಸಿಎಸ್ಆರ್ ನಿಧಿಯಲ್ಲಿ ನಿರ್ಮಾಣ ಮಾಡಿರುವ ಅಂಗವಿಕಲ ಮಕ್ಕಳ ಶಾಲಾ ಸಿದ್ಧತಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ರಾಮನಗರದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲಾ ಸಿದ್ಧತಾ ಕೇಂದ್ರ ಕಟ್ಟಡ ಅವಶ್ಯವಿತ್ತು. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿ ತನ್ನ ಸಿಎಸ್ಆರ್ ಚಟುವಟಿಕೆಯಡಿ ಅಂಗವಿಕಲ ಮಕ್ಕಳಿಗೆ ಸುಸಜ್ಜಿತ ಕೇಂದ್ರ ನಿರ್ಮಿಸಿ ಅವರ ನೆರವಿಗೆ ನಿಂತಿದೆ ಎಂದರು.
ಅಂಗವೈಕಲ್ಯಶಾಪವಲ್ಲ. ಅವರ ಬಗ್ಗೆ ಸಮಾಜ ಮತ್ತು ಪಾಲಕರಲ್ಲಿ ಕೀಳರಿಮೆ ಬೇಡ. ಅವರಿಗೂ ಎಲ್ಲರಂತೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡೋಣ. ಮಕ್ಕಳು ದೇವರ ಪ್ರತಿಕ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಸ್ಥಳಿಯ ಕಂಪನಿಗಳ ಸಿಎಸ್ಆರ್ ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತಿದೆ. ಪಂಚಾಯಿತಿಗೆ ಒಂದೇ ಹೈಟೆಕ್ ಶಾಲೆ ನಿರ್ಮಿಸಲಾಗುತ್ತಿದೆ. ಒಂದೇ ಸೂರಿನಡಿ ಎಲ್ಲ ರೀತಿಯ ಶಿಕ್ಷಣ ಸವಲತ್ತುಗಳು ಸಿಗಲಿವೆ. ಇದು ಶಿಕ್ಷಣ ೇತ್ರದಲ್ಲಿ ಮಾದರಿಯಾಗಲಿದ್ದು, ಶಿಕ್ಷಣ ಕ್ಷೇತ್ರದ ನ್ಯೂನತೆಗಳನ್ನು ಸರಿಪಡಿಸಲು ಇದೊಂದು ಉತ್ತಮ ಮಾರ್ಗವಾಗಲಿದೆ ಎಂದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸೋಮಲಿಂಗಯ್ಯ ಮಾತನಾಡಿ, ಸುಸಜ್ಜಿತ ಕೇಂದ್ರ ಸಣ್ಣ ಕೊಠಡಿಯಲ್ಲಿ ನಡೆಯುತ್ತಿತ್ತು. ಇದನ್ನು ಮನಗಂಡು ಶಾಸಕರು ಕೇಂದ್ರದ ನಿರ್ಮಾಣಕ್ಕೆ ನೆರವಾದರು. ಇದರಲ್ಲಿ 40ಕ್ಕೂ ಹೆಚ್ಚು ಮಕ್ಕಳಿಗೆ ಮನೆಯಾಧಾರಿತ ಶಿಕ್ಷಣ ನೀಡುವ ಕೆಲಸ ಆಗುತ್ತಿದೆ. ಆರೋಗ್ಯ ತಪಾಸಣೆ, ವಿಶೇಷ ಕ್ರೀಡಾಕೂಟ, ಪ್ರವಾಸ ಆಯೋಜಿಸಿ ಅವರ ನೆರವಿಗೆ ಶಿಕ್ಷಣ ಇಲಾಖೆ ನಿಂತಿದೆ ಎಂದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ರಾಜ್ಯದಲ್ಲೇ ಮಾದರಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ಕಟ್ಟಡ ನಿರ್ಮಿಸುವ ಸೌಭಾಗ್ಯ ನಮಗೆ ಸಿಕ್ಕಿದ್ದು ಅಭಿನಂದನೀಯ ಎಂದರು.
ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಪ್ರಕಾಶ್, ನಗರಸಭೆ ಸದಸ್ಯರಾದ ನಿಜಾಮುದ್ದೀನ್ ಷರೀಫ್, ಅಜ್ಮತ್, ಅಣ್ಣು, ಶಿಕ್ಷಕರಾದ ಸುರೇಶ್, ಶಿವಸ್ವಾಮಿ, ದುಂಡುಮಾದಯ್ಯ ಇತರರು ಇದ್ದರು.