ಮಕ್ಕಳ ಯೋಗಕ್ಷೇಮ ವಿಚಾರಿಸಿದ ನ್ಯಾಯಾಧೀಶ

24 GVT 05
Published on

ಗಂಗಾವತಿ: ನಗರದ ಮಹೆಬೂಬ್ ನಗರದ ಅಂಗನವಾಡಿ ಕೇಂದ್ರದ ಛಾವಣಿ ಸ್ಲ್ಯಾಬ್ ಕುಸಿದು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಯೋಗಕ್ಷೇಮವನ್ನು ಜೆಎಂಎ್ಸಿ ಹಿರಿಯ ನ್ಯಾಯಾಧೀಶ ರಮೇಶ ಗಾಣಿಗೇರ್ ಮಂಗಳವಾರ ವಿಚಾರಿಸಿದ್ದು, ಮಾಹಿತಿ ಪಡೆದುಕೊಂಡರು.

ಚಿಕಿತ್ಸೆ ಪಡೆಯುತ್ತಿರುವ ನಗರದ ಉಪವಿಭಾಗ ಆಸ್ಪತ್ರೆಗೆ ತೆರಳಿದ ನ್ಯಾಯಾಧೀಶ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದು, ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿ ಡಾ.ಗೌರಿಶಂಕರ್‌ಗೆ ಸೂಚಿಸಿದರು.

ನಂತರ ಮಹೆಬೂಬ್‌ನಗರದ ಅಂಗನವಾಡಿಗೆ ತೆರಳಿ ಪರಿಶೀಲಿಸಿದರು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರೊಂದಿಗೆ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಸಮಗ್ರ ವರದಿಯನ್ನು ಸಲ್ಲಿಸುವಂತೆ ಸಿಡಿಪಿಒ ಜಯಶ್ರೀಗೆ ಸೂಚಿಸಿದರು.

ಭೇಟಿ: ಉಪವಿಭಾಗ ಆಸ್ಪತ್ರೆಗೆ ಎಸಿ ಕ್ಯಾ.ಮಹೇಶ ಮಾಲಗಿತ್ತಿ ಮತ್ತು ತಹಸೀಲ್ದಾರ್ ಯು.ನಾಗರಾಜ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸಿಡಿಪಿಒ ನೀಡುವ ವರದಿ ಆಧಾರದಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಘಟನೆಯನ್ನು ಸಿಪಿಐ(ಎಂಎಲ್)ಲಿಬರೇಶನ್ ತಾಲೂಕು ಸಮಿತಿ ಖಂಡಿಸಿದ್ದು, ಘಟನೆಗೆ ಕಳಪೆ ಕಾಮಗಾರಿ ಸಾಕ್ಷಿ ಎಂದರು. ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮಕ್ಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೈರಾಜು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net