ಆಸ್ತಿಗಾಗಿ ಹೆತ್ತವರಿಗೆ ಕೊಲೆ ಬೆದರಿಕೆ ಹಾಕುತ್ತಿರುವ ಮಕ್ಕಳು; ಹೆತ್ತ ಮಕ್ಕಳಿಂದ ರಕ್ಷಣೆ ಕೋರಿದ ವೃದ್ಧ ದಂಪತಿ

MANJUNATH- press meet (9)
Published on

ಹಾಸನ: ಪಿತ್ರಾರ್ಜಿತ ಆಸ್ತಿಯ ಜತೆಗೆ ಸ್ವಯಾರ್ಜಿತ ಆಸ್ತಿಯನ್ನು ನಮ್ಮ ಹೆಸರಿಗೆ ಬರೆದು ನೀವು ವೃದ್ಧಾಶ್ರಮಕ್ಕೆ ಹೋಗಿ, ಇಲ್ಲದಿದ್ದರೆ ನಿಮ್ಮನ್ನು

ಕೊಲೆ ಮಾಡುತ್ತೇವೆ ಎಂದು ಹೆತ್ತ ಮಕ್ಕಳೇ ಪೋಷಕರಿಗೆ ಬೆದರಿಕೆ ಸಹ ಹಾಕುತ್ತಿರುವ ಘಟನೆ ಗಂಡಸಿ ಹೋಬಳಿ ಗಿಡ್ಡೇಗೌಡನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಈ ಸಂಬಂಧ ಗುರುವಾರ ಸುದ್ದಿಗೋಷ್ಠಿ ನಡೆಸಿ ತಮ್ಮ ಅಳಲು ತೋಡಿಕೊಂಡ ಗಿಡ್ಡೇಗೌಡನ ಕೊಪ್ಪಲು ಗ್ರಾಮದ ಮಂಜುನಾಥ್ -ರಾಧಾ ದಂಪತಿ, ನಮಗೆ ರಕ್ಷಣೆ ಕೊಡಿ, ಇರುವಷ್ಟು ದಿನ ಬದುಕಲು ಬಿಡಿ ಎಂದು ಗೋಳಾಡಿದರು.

ನಮಗಿದ್ದ ಪಿತ್ರಾರ್ಜಿತ ಆಸ್ತಿಯಲ್ಲಿ ಮೂವರು ಮಕ್ಕಳಾದ ಲೋಹಿತ್ ಕುಮಾರ್, ಹೇಮಂತ್ ಹಾಗೂ ಹರ್ಷಿತ್ ಕುಮಾರ್ ಎಂಬುವರಿಗೆ ತಲಾ 4 ಎಕರೆಯಂತೆ ಭಾಗ ಮಾಡಿಕೊಟ್ಟಿದ್ದೇನೆ. ಇಷ್ಟಾದರೂ ಮಕ್ಕಳಿಗೆ ಸಮಾಧಾನ ಆಗಿಲ್ಲ. ಬದಲಾಗಿ ಸ್ವಯಾರ್ಜಿತ 1 ಎಕರೆ ಸೇರಿ ಜೀವನಾಂಶಕ್ಕೆಂದು ನಾನು-ಪತ್ನಿ ಇಟ್ಟುಕೊಂಡಿರುವ ಒಟ್ಟು 4 ಎಕರೆ ಜಮೀನನ್ನೂ ನಮ್ಮ ಹೆಸರಿಗೆ ಬರೆದುಕೊಡು. ಅದಕ್ಕೂ ಮುನ್ನ ನೀನೇ ಮಾಡಿರುವ ಎಲ್ಲ ಸಾಲ ತೀರಿಸು. ಇಲ್ಲದಿದ್ದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ನನಗೆ ಹೃದಯದ ತೊಂದರೆಯಿಂದ ಪಾರ್ಶ್ವವಾಯು ತಗುಲಿ ಸ್ವಾಧೀನ ಕಡಿಮೆಯಾಗಿ, ಎರಡೂ ಕಾಲುಗಳಿಂದ ಸರಿಯಾಗಿ ನಡೆಯಲಾಗುತ್ತಿಲ್ಲ. ಯೂರಿನರಿ ಬ್ಲಾಡರ್ ಸಂಬಂಧ 13 ಇಂಚು ಶಸ್ತ್ರಚಿಕಿತ್ಸೆ ಆಗಿದೆ. ಆದರೂ ಮೂತ್ರ ವಿಸರ್ಜನೆ ಕಷ್ಟ ಆಗುತ್ತಿದೆ. ಇತ್ತೀಚೆಗೆ ಆಸ್ಪತ್ರೆ ಖರ್ಚು, ಹಿಂದೆ 24 ಕೊಳವೆಬಾವಿ ಕೊರೆಸಿದ್ದು ಹಾಗೂ ಜಮೀನು ಅಭಿವೃದ್ಧಿಗೆಂದು ಸುಮಾರು 50 ಲಕ್ಷ ರೂ. ಸಾಲ ಮಾಡಿದ್ದೇನೆ. ಇಷ್ಟೂ ಸಾಲ ನೀನೇ ತೀರಿಸಿ ನಂತರ ಎಲ್ಲ ಜಮೀನು ನಮಗೆ ಕೊಟ್ಟು ನೀವು ಎಲ್ಲಿಗಾದರೂ ಹೋಗಿ, ಇಲ್ಲ ಸಾಯಿರಿ ಎಂದು ಬಟ್ಟೆ ಬರೆಯನ್ನು ಮನೆಯಿಂದ ಹೊರ ಎಸೆಯುತ್ತಿದ್ದಾರೆ ಎಂದು ಅಲವತ್ತುಕೊಂಡರು.

ನಾನು ಅನಾರೋಗ್ಯದಿಂದ ಆಸ್ಪತ್ರೆ ಸೇರಿದರೂ ಮೂವರು ಮಕ್ಕಳಾಗಲೀ, ಸೊಸೆಯಂದಿರಾಗಲೀ ಆರೈಕೆ ಮಾಡಲಿಲ್ಲ. ಒಮ್ಮೆಯೂ ಆಸ್ಪತ್ರೆಗೆ ಬರಲಿಲ್ಲ. ಇದೀಗ ಎಲ್ಲ ಆಸ್ತಿ ಬೇಕು ಎಂದು ನಮ್ಮನ್ನು ಬೀದಿಪಾಲು ಮಾಡಲು ಹೊರಟಿದ್ದಾರೆ. ನಮಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಹೆತ್ತ ಮಕ್ಕಳೇ ನಮಗೆ ಬೆದರಿಕೆ ಒಡ್ಡುತ್ತಿರುವ ಬಗ್ಗೆ ಗಂಡಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ನಮ್ಮ ಮಾತನ್ನೂ ಕೇಳದೆ ನಿತ್ಯವೂ ಕಾಟ ಕೊಡುತ್ತಿದ್ದಾರೆ. ದಯವಿಟ್ಟು ನಮಗೆ ರಕ್ಷಣೆ ಕೊಡಿಸಿ ಎಂದು ಮನವಿ ಮಾಡಿದರು.

ಈಗ ಆಸ್ಪತ್ರೆ ವೆಚ್ಚಕ್ಕೂ ನಮ್ಮ ಬಳಿ ಹಣ ಇಲ್ಲ. ಇದಕ್ಕಾಗಿ ನನ್ನ ಹೆಸರಿನಲ್ಲಿರುವ ಜಮೀನನ್ನು ಮಾರಾಟ ಮಾಡಲೂ ಬಿಡುತ್ತಿಲ್ಲ. ಕಾರಿನಿಂದ ಗುದ್ದಿಸಿ ನನ್ನನ್ನು ಕೊಲೆ ಮಾಡಲು ಎರಡು ಬಾರಿ ಪ್ರಯತ್ನ ಮಾಡಿದ್ದಾರೆ. ಹೇಗೋ ಬಚಾವಾಗಿದ್ದೇನೆ. ಪ್ರತಿದಿನ ಜೀವಭಯದಲ್ಲೇ ಬದುಕುತ್ತಿದ್ದೇನೆ ಎಂದು ದಂಪತಿ ಕಣ್ಣೀರ ಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net