

ಹಲಗೂರು: ಶ್ರೀ ಲೀಲಾ ನಾಗರಾಜಪ್ಪ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಶನಿವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಪ್ರಸ್ತುತ ಮಕ್ಕಳಲ್ಲಿ ಮೊಬೈಲ್ ಚಟ ಹೆಚ್ಚಾಗಿದ್ದು, ಇದು ಶೈಕ್ಷಣಿಕ ಪ್ರಗತಿಗೆ ಮಾರಕ. ಶಿಕ್ಷಣಕ್ಕಾಗಿ ಮೊಬೈಲ್ ಬಳಕೆ ಮಾಡಬೇಕೆ ಹೊರತು ಮನರಂಜನೆಗಲ್ಲ ಎಂದರು.
ಮಳವಳ್ಳಿ ತಾಲೂಕಿನ ಪ್ರತಿ ಸರ್ಕಾರಿ ಶಾಲೆಗೆ ಟ್ಯಾಬ್ ವಿತರಣೆ ಮಾಡಲಾಗುತ್ತಿದ್ದು, ಮುಂದಿನ ಒಂದು ವರ್ಷದೊಳಗಾಗಿ ಪ್ರತಿ ಶಾಲೆಯಲ್ಲೂ ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಇಸ್ರೋ ಮರು ಸಂಪರ್ಕ ಮೂಲಕ ನೇರವಾಗಿ ಕ್ಲಸ್ಟರ್ ಮಟ್ಟದಲ್ಲಿ ಒಂದೊಂದು ಶಾಲೆ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳನ್ನು ಅದರ ಸಂಪರ್ಕಕ್ಕೆ ಬರುವಂತೆ ಮಾಡಲಾಗುವುದು ಎಂದರು.
ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಇಸ್ರೋ ಸಹಕಾರ ಪಡೆದು ಯೋಜನೆ ಜಾರಿಗೆ ತರಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ಇಸ್ರೋ ಸಂಸ್ಥೆಯ ಸಹಾಯಕ ನಿರ್ದೇಶಕ ರಾಮನಗೌಡ ವಿ.ನಾಡಗೌಡ ಮಾತನಾಡಿ, ಸಂಸ್ಥೆಯ 20ಕ್ಕೂ ಹೆಚ್ಚು ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮಕ್ಕಳಿಗೆ ಅನುಕೂಲವಾಗುವ ಹಲವಾರು ಮಾಹಿತಿ ನೀಡಿದ್ದಾರೆ. ಅಲ್ಲದೆ ಪ್ರತಿವರ್ಷ ಅ.4 ರಿಂದ 10ರವರೆಗೆ ಸಪ್ತಾಹ ನಡೆಯಲಿದೆ ಎಂದರು.
ರಾಕೆಟ್, ಅಂತರಿಕ್ಷ ವಿಜ್ಞಾನ, ಇಸ್ರೋ ಸಂಸ್ಥೆಯ ಯಶಸ್ಸಿನ ಹಾದಿ ಮತ್ತು ವಸ್ತು ಪ್ರದರ್ಶನ, ರಸಪ್ರಶ್ನೆ ಕಾರ್ಯಕ್ರಮ, ಆಶುಭಾಷಣ ಸ್ಪರ್ಧೆ, ಜ್ಞಾಪಕ ಶಕ್ತಿ ಪರೀಕ್ಷೆ, ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದವರೆಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರನ್ನು ಎಚ್.ವಿ.ಅಶ್ವಿನ್ ಕುಮಾರ್ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ರಮಣಗೌಡ, ವಿ.ನಾಡಗೌಡ, ಆನಂದ್, ನಾಗೇಂದ್ರ. ಹಲಗೂರು ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಧರ್, ಬಿಇಒ ಉಮಾ ಇತರರು ಇದ್ದರು.