ಬಾಣಂತಿಯರು ಎದೆಹಾಲಿನ ಮಹತ್ವ ಅರಿಯಿರಿ: ಡಾ.ನಂಜುಂಡಯ್ಯ

sthnayapana
Published on

ಮಡಿಕೇರಿ: ಬಾಣಂತಿಯರು ಮೊದಲು ಎದೆಹಾಲಿನ ಮಹತ್ವ ಅರಿತುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ ಹೇಳಿದರು.


ಜಿಲ್ಲಾಸ್ಪತ್ರೆಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಗುರುವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಸ್ತನ್ಯಪಾನವು ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ. ಅಸ್ತಮಾ, ಆಹಾರ ಅಲರ್ಜಿ, ಮಧುಮೇಹ ಮತ್ತು ಅನೀಮಿಯಾ ಆಗುವ ಅಪಾಯಗಳು ಕಡಿಮೆ ಎಂದ ಅವರು, ಪ್ರಸವದ ನಂತರ ಬರಬಹುದಾದ ಖಿನ್ನತೆ ಕಡಿಮೆಯಾಗುತ್ತದೆ. ಬಾಣಂತಿಯರು ಎದೆಹಾಲಿನ ಮಹತ್ವದ ಬಗ್ಗೆ ಅರಿತು ಮಗು ಜನಿಸಿದ ಒಂದು ಗಂಟೆಯೊಳಗೆ ಹಾಲುಣಿಸುವುದರಿಂದ ಮಗುವಿನ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.


ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎ.ಆರ್.ಮಧುಸೂಧನ್ ಮಾತನಾಡಿ, ಆ.೧ ರಿಂದ ೭ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಸ್ತನ್ಯಪಾನದ ಪ್ರಯೋಜನಗಳನ್ನು ಉತ್ತೇಜಿಸಲು ಮತ್ತು ಮಕ್ಕಳ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಉತ್ತೇಜಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯಾದ್ಯಂತ ಎಲ್ಲಾ ಜಿಲ್ಲಾ ಆಸ್ಪತ್ರೆ/ ತಾಲೂಕು ಆಸ್ಪತ್ರೆ, ಸ.ಆ.ಕೇಂದ್ರ, ಪ್ರಾ.ಆ.ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ ಡಾ.ಪುರುಷೋತ್ತಮ್ ಮಾತನಾಡಿ, ದೇಶದಲ್ಲಿ ಎನ್.ಎಫ್.ಎಚ್.ಎಸ್ ೪ರ ಪ್ರಕಾರ ಮಗು ಜನಿಸಿದ ಒಂದು ಗಂಟೆಯೊಳಗೆ ಎದೆಹಾಲು ಉಣಿಸುತ್ತಿರುವವರ ಸಂಖ್ಯೆ ಕೇವಲ ಶೇ.೪೮ ಇದೆ. ಶೇ.೫೨ ರಷ್ಟು ಮಕ್ಕಳು ಒಂದು ಗಂಟೆಯ ಒಳಗಿನ ಎದೆಹಾಲು ಸೇವನೆಯಿಂದ ವಂಚಿತರಾಗುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಎದೆಹಾಲು ಬಿಟ್ಟು ಇತರೆ ಬಾಟಲ್ ಹಾಲು ನೀಡುತ್ತಿರುವುದರಿಂದ ಮಕ್ಕಳಿಗೆ ಅಪೌಷ್ಠಿಕತೆ, ಸೋಂಕು ತಗಲುವ ಸಂಭವ ಹೆಚ್ಚು. ಎದೆಹಾಲನ್ನು ಮಗು ಜನಿಸಿದ ಒಂದು ಗಂಟೆಯೊಳಗೆ ಪ್ರಾರಂಭಿಸಿ ಕನಿಷ್ಠ ೬ ತಿಂಗಳವರೆಗೆ ನೀಡಬೇಕು ಹಾಗೂ ಗರಿಷ್ಟ ೨ ರಿಂದ ೩ ವರ್ಷಗಳವರೆಗೂ ನೀಡುವುದು ಉತ್ತಮ ಎಂದು ತಿಳಿಸಿದರು.


ಮೂಡನಂಬಿಕೆಗಳಿಂದ ಜೇನುತುಪ್ಪ, ಸಿಹಿನೀರು, ಇತರೆ ಆಹಾರವನ್ನು ಮಗುವಿಗೆ ನೀಡುವುದರಿಂದ ಶಿಶುಗಳಿಗೆ ಸೋಂಕು ತಗಲುವ ಸಂಭವ ಹೆಚ್ಚಿರುತ್ತದೆ. ಅಲ್ಲದೇ ಎದೆನಾಗರ, ಇತರೆ ಕಾಯಿಲೆಗಳಿಗೆ ತಪ್ಪು ನಂಬಿಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ತಿಳಿಸಿದರು.


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞ ಡಾ.ರವಿಚಂದ್ರ ಮಾತನಾಡಿ, ಪ್ರತೀ ಪ್ರಾಣಿಗಳು ತಮ್ಮ ಮಕ್ಕಳಿಗೆ ಹುಟ್ಟಿದ ಕೂಡಲೇ ಎದೆಹಾಲನ್ನು ನೀಡುತ್ತವೆ. ಈಗಿನ ತಾಯಂದಿರು ಮಗು ಜನಿಸಿದ ತಕ್ಷಣ ಎದೆಹಾಲು ನೀಡುವುದು ಕಡಿಮೆ. ತಾಯಿಯ ಎದೆಹಾಲು ಅಮೃತ. ಇದರಲ್ಲಿ ಮಗುವಿಗೆ ಅವಶ್ಯಕವಾದ ಪೋಷಕಾಂಶಗಳು, ರೋಗ ನಿರೋಧಕ ಶಕ್ತಿ ಇದ್ದು, ಮಗುವಿನ ಮೆದುಳಿನ ಬೆಳವಣಿಗೆಗೆ ಅತ್ಯಾವಶ್ಯಕ ಎಂದು ತಿಳಿಸಿದರು.


ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕ ಡಾ.ದಿವ್ಯಾರಾಣಿ ಪಿಪಿಟಿ ಮುಖಾಂತರ ವಿವರಿಸಿ, ಮಗುವಿಗೆ ಜನ್ಮ ನೀಡುವುದು ಒಂದು ಸಂಕೀರ್ಣ ಕ್ರಿಯೆ. ತಾಯಿಯ ಎದೆಹಾಲು ವಿಶ್ವದ ಶ್ರೇಷ್ಠ ಆಹಾರ. ಇದು ಅಮೃತಕ್ಕೆ ಸಮಾನ. ಸಂಪೂರ್ಣ ಪೌಷ್ಠಿಕ ಸಮತೋಲನ ಆಹಾರ. ಭಾವನಾತ್ಮಕ ಸಂಬಂಧದ ಬೆಸುಗೆ, ಸುಲಭವಾಗಿ ಜೀರ್ಣವಾಗುವ, ಸಂರಕ್ಷಿಸಿ ಇಡುವ ಅಗತ್ಯವಿಲ್ಲದ, ಖರ್ಚಿಲ್ಲದ, ಮಗುವಿಗೆ ರುಚಿಯಾದ ಸಿದ್ಧ ಆಹಾರ. ಅಮೃತ ಸಂಜೀವಿನಿ ಎಂದು ತಿಳಿಸಿದರು.


ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ಅವರು, ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಉದ್ದೇಶಗಳು, ಆಚರಣೆ, ಸೆಮಿನಾರ್ ಆಯೋಜಿಸಿ ಸಾಮಾನ್ಯ ಮಹಿಳೆಯರಿಗೆ ಸ್ತನ್ಯಪಾನದ ಉಪಯುಕ್ತತೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲು ಸ್ತ್ರೀರೋಗ ತಜ್ಞರಿಂದ ಉಪನ್ಯಾಸ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು, ಸಿಬ್ಬಂಧಿಗಳು, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಗರ್ಭಿಣಿಯರು, ಬಾಣಂತಿಯರು, ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net