ಮಕ್ಕಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಬೇಕು : ಪ್ರೊ.ಎನ್.ಕೆ. ಲೋಕನಾಥ್

ಉದಯಗಿರಿಯ ಎಂ.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ತನ್ವೀರ್ ಸೇಠ್, ಮಹಮ್ಮದ್ ಖಾಸಿಮ್, ಡಾ. ಸೈಯದ್ ಶಾಕೀಬ್ ರೆಹಮಾನ್ ಹಾಗೂ ಇತರರು ಇದ್ದರು.
ಉದಯಗಿರಿಯ ಎಂ.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ತನ್ವೀರ್ ಸೇಠ್, ಮಹಮ್ಮದ್ ಖಾಸಿಮ್, ಡಾ. ಸೈಯದ್ ಶಾಕೀಬ್ ರೆಹಮಾನ್ ಹಾಗೂ ಇತರರು ಇದ್ದರು.
Published on: 

ಮೈಸೂರು: ಮಕ್ಕಳ ಆರಂಭಿಕ ಹಂತದಲ್ಲೇ ಶಿಕ್ಷಣದ ಬಗ್ಗೆ ಆಸಕ್ತಿ ಮತ್ತು ಕಲಿಕೆಯ ಅಭ್ಯಾಸ ಬೆಳೆಸುವುದು ಅತ್ಯಗತ್ಯ. ಈ ಹಂತದಲ್ಲಿ ವ್ಯವಸ್ಥಿತ ಕಲಿಕೆಯಿಂದ ಮಕ್ಕಳು ವಂಚಿತರಾದರೆ, ಮುಂದೆ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.

ಉದಯಗಿರಿಯ ಎಂ.ಇ.ಎಸ್. ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮುಸ್ಲಿಂ ಎಜುಕೇಷನಲ್ ಸೊಸೈಟಿ ವತಿಯಿಂದ ಶನಿವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆ ಕೇವಲ ಕಟ್ಟಡಗಳು ಮತ್ತು ಮೂಲಸೌಕರ್ಯದಿಂದ ನಿರ್ಧಾರವಾಗುವುದಿಲ್ಲ. ಅದರ ಹಿಂದೆ ಇರುವ ದೂರದೃಷ್ಟಿ, ನಂಬಿಕೆ, ಬದ್ಧತೆ ಹಾಗೂ ಸಮಾಜಕ್ಕೆ ಶಿಕ್ಷಣ ನೀಡಬೇಕೆಂಬ ಸಾಮೂಹಿಕ ಸಂಕಲ್ಪ ಮುಖ್ಯವಾಗುತ್ತದೆ. ಮುಸ್ಲಿಂ ಎಜುಕೇಷನಲ್ ಸೊಸೈಟಿಯ ಐದು ದಶಕಗಳ ಪಯಣ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು.

ಮೈಸೂರು ವಿಶ್ವವಿದ್ಯಾಲಯಕ್ಕೂ ನಗರದ ಶಿಕ್ಷಣ ಸಂಸ್ಥೆಗಳಿಗೂ ಪರಸ್ಪರ ಪೂರಕ ಸಂಬಂಧವಿದೆ. ಐತಿಹಾಸಿಕ ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣದಲ್ಲಿ ಮುಸ್ಲಿಂ ಎಜುಕೇಷನಲ್ ಸೊಸೈಟಿಯಂತಹ ಸಂಸ್ಥೆ ಐದು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ವಿದ್ಯಾರ್ಥಿಗಳು ವಿವೇಚನೆ ಬೆಳೆಸಿಕೊಳ್ಳಬೇಕು. ಮೊಬೈಲ್ ಮತ್ತು ರೀಲ್ಸ್‌ಗಳಲ್ಲೇ ಹೆಚ್ಚಿನ ಸಮಯ ಕಳೆಯುವ ಬದಲು ತಮ್ಮಲ್ಲಿರುವ ಸೃಜನಶೀಲತೆಯನ್ನು ಬೆಳೆಸುವ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ತಂತ್ರಜ್ಞಾನ ಇಂದು ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹತ್ವದ ಪಾತ್ರ ವಹಿಸುತ್ತಿದೆ. ಅದರ ಪ್ರಯೋಜನ ಪಡೆದುಕೊಂಡು ವಿದ್ಯಾರ್ಥಿಗಳು ಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಬೇಕು. ಆದರೆ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಮಾನವೀಯ ಸಂಬಂಧಗಳು ಮತ್ತು ಮೌಲ್ಯಗಳು ದೂರವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಎಜುಕೇಷನಲ್ ಸೊಸೈಟಿ ಸಹ ಕಾರ್ಯದರ್ಶಿ ಮಹಮ್ಮದ್ ಖಾಸಿಮ್, ಪ್ರಮುಖರಾದ ಡಾ. ಸೈಯದ್ ಶಾಕೀಬ್ ರೆಹಮಾನ್, ಪ್ರೊ.ಅಹಮದ್ ಸಾಹೇಬ್, ಸಲ್ಮಾನ್ ಖಾನ್ ಸಾಹೇಬ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net