'ಮಕ್ಕಳಿಗೆ ಮತ್ತಷ್ಟು ಸಾಧಿಸುವ ಪ್ರೋತ್ಸಾಹ ನೀಡಬೇಕು'

oplus_2097152
oplus_2097152
Published on

ಮೈಸೂರು: ಶಿಕ್ಷಕರು ಮಕ್ಕಳಲ್ಲಿ ಹುದುಗಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡಬೇಕು. ಹಾಗೆಯೇ ಮಕ್ಕಳ ಕ್ರೀಡಾ ಪ್ರತಿಭೆಯನ್ನು ಗೌರವಿಸುವ ಮೂಲಕ ಮತ್ತಷ್ಟು ಸಾಧಿಸಲು ಪ್ರೇರಣೆ ನೀಡಬೇಕು ಎಂದು ಗ್ರಾಮಾಂತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ವಿವೇಕಾನಂದ ಕರೆ ನೀಡಿದರು.
ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಮೈಸೂರು ತಾಲೂಕು ವರುಣ ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ಬುಧವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳ ಬೆಳೆಸಲು ಕ್ರೀಡೆ ಸಹಕಾರಿ ಎಂದರು.
ಮಕ್ಕಳಿಗೆ ಮಾನಸಿಕ ಆರೋಗ್ಯದಷ್ಟೇ ದೈಹಿಕ ಆರೋಗ್ಯ ತುಂಬ ಮುಖ್ಯ. ಮಕ್ಕಳನ್ನು ಸಿಹಿ ಮತ್ತು ಜಂಕ್ ಆಹಾರ ತಿನಿಸುಗಳಿಂದ ದೂರವಿಸಿ ಉತ್ತಮ ಆಹಾರ ಸಂಸ್ಕೃತಿ ರೂಢಿಸಬೇಕು. ಓದುವ, ಕ್ರೀಡೆ ಇತ್ಯಾದಿ ಉತ್ತಮ ಹವ್ಯಾಸಗಳನ್ನು ಬೆಳೆಸಬೇಕು ಎಂದರು.
ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮತ್ತು ಉದ್ಯೋಗದಲ್ಲಿ ವಿಪುಲ ಅವಕಾಶಗಳಿವೆ. ಆದ್ದರಿಂದ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಬೇಕು ಎಂದರು.
ಕಲಿಸು ಫೌಂಡೇಶನ್ ನಿರ್ದೇಶಕ ನಿಖಿಲೇಶ್ ಮಾತನಾಡಿ, ಪಠ್ಯದಷ್ಟೇ ಕ್ರೀಡೆಯು ಮುಖ್ಯ. ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳಿಗೆ ಉತ್ತಮ ಕ್ರೀಡಾ ತರಬೇತಿ ನೀಡಬೇಕು. ಆ ಮೂಲಕ ಅವರಲ್ಲಿ ಸದೃಢ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಬೇಕು ಎಂದರು.
ವಕೀಲ ಮಧು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಾಲಂಗಿ ಸುರೇಶ್, ನಿರ್ದೇಶಕ ಟಿ.ಸತೀಶ್ ಜವರೇಗೌಡ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಖಜಾಂಚಿ ಮಹದೇವ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮೂರ್ತಿನಾಯಕ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರಘು, ಶಿವಪ್ಪ, ವೆಂಕಟೇಶ್, ಮಾಲೇಗೌಡ, ಅನಿಲ್ ಕುಮಾರ್, ದಾನಿಗಳಾದ ನಾಗಶ್ರೀ ನಿಖಿಲೇಶ್, ರಾಜೇಶ್ ಪಟ್ವಾನ್, ದೈಹಿಕ ಶಿಕ್ಷಣಕರ ಸಂಘದ ಅಧ್ಯಕ್ಷ ಕುಮಾರ್, ಸಿಆರ್‌ಪಿ ದೀಪು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net