

ಪಾಂಡವಪುರ: ಬಿಜಿಎಸ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಬೆಳೆಸುವ ಕೆಲಸ ಮಾಡುತ್ತಿದೆ, ಮಕ್ಕಳು ಸಂಸ್ಕಾರವಂತರಾಗಿ ತಂದೆ-ತಾಯಿಗೆ ಗೌರವ ತಂದುಕೊಡುವ ಕೆಲಸ ಮಾಡಬೇಕು ಎಂದು ಬಿಜಿಎಸ್ ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.
ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಬಿಜಿಎಸ್ ಕಲರವ ಹಾಗೂ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಅವರನ್ನು ಸುಸಂಸ್ಕೃತರನ್ನಾಗಿ ಮಾಡಬೇಕು. ಮಕ್ಕಳನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಧ್ಯೇಯವಾಗಿದೆ. ಹಾಗಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಬಿಜಿಎಸ್ ಕಲರವ ಹಾಗೂ ಪಾದಪೂಜೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಜನ್ಮಕೊಟ್ಟ ತಂದೆತಾಯಿ, ಗುರು-ಹಿರಿಯರಿಗೆ ಗೌರವ ಕೊಡುವುದೇ ಕಡಿಮೆಯಾಗಿದೆ. ಪಾಲಕರು, ಗುರು-ಹಿರಿಯರಿಗೆ ಗೌರವ ಕೊಡಬೇಕು. ಅದಕ್ಕಾಗಿಯೇ ಮಕ್ಕಳಿಂದ ಪಾಲಕರಿಗೆ ಪಾದಪೂಜೆ ನಡೆಸುವ ಮೂಲಕ ಸಂಸ್ಕಾರ ಬೆಳೆಸುತ್ತಿದ್ದೇವೆ. ನಮ್ಮ ಎಲ್ಲ ಶಿಕ್ಷಣ ಸಂಸ್ಥೆಯಲ್ಲೂ ಇಂತಹ ಕಾರ‌್ಯಕ್ರಮ ನಡೆಸುತ್ತಿದ್ದೇವೆ ಎಂದು ಹೇಳಿದರು.
ಮಕ್ಕಳು ಸಂಸ್ಕಾರವನ್ನು ಬೆಳೆಸಿಕೊಂಡು ಮುನ್ನಡೆಯಬೇಕು, ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ಸಮಾಜಕ್ಕೂ ತಮ್ಮೆಯಾದ ಕೊಡುಗೆ ನೀಡಬೇಕು, ಜನ್ಮಕೊಟ್ಟ ತಂದೆ-ತಾಯಿಗೆ ಗೌರವ ತಂದುಕೊಡಬೇಕು. ತಮ್ಮ ವಂಶದ ಕೀರ್ತಿಯನ್ನು ಬೆಳಗುವ ಕೆಲಸ ಮಾಡಬೇಕು ತಿಳಿಸಿದರು.
ಮೊಬೈಲ್, ದೃಶ್ಯಮಾಧ್ಯಮಗಳು ಹಾಗೂ ಆಸೆ, ವ್ಯಾಮೋಹಗಳಿಗೆ ಒಳಗಾಗಿ ಮಕ್ಕಳು ತಮ್ಮ ಭವಿಷ್ಯವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮಕ್ಕಳು ಸಾಧ್ಯವಾದಷ್ಟು ಇಂತಹ ದುಶ್ಚಟಗಳಿಂದ ದೂರ ಇರಬೇಕು. ಮುಂದಿನ ದಿನಗಳಲ್ಲಿ ಪರೀಕ್ಷೆ ಹತ್ತಿರಬರುತ್ತಿದೆ. ಸಾಂಸ್ಕೃತಿಕ ಕಾರ‌್ಯಕ್ರಮ ಮುಗಿದ ಬಳಿಕ ಓದಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಳಗ್ಗೆ ಪಿಯುಸಿ ಮಕ್ಕಳಿಂದ ಪಾಲಕರಿಗೆ ಪಾದಪೂಜೆ ಮಾಡಿಸುವ ಕಾರ್ಯಕ್ರಮ ನಡೆಯಿತು. ನಂತರ ಮಧ್ಯಾಹ್ನ ನಡೆದ ಬಿಜಿಎಸ್ ಕಲರವ ಕಾರ್ಯಕ್ರಮದಲ್ಲಿ ಮಕ್ಕಳು ಹಾಡುಗಳಿಗೆ ನೃತ್ಯ ಮಾಡುವ ಮೂಲಕ ರಂಜಿಸಿದರು. ಮಕ್ಕಳ ನೃತ್ಯ ಪ್ರದರ್ಶನವನ್ನು ಕಂಡು ಪೋಷಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಸಮಾರಂಭದಲ್ಲಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಲಕ್ಷ್ಮೀನಾರಾಯಣ್, ಉಪನ್ಯಾಸಕ ರಾಮಕೃಷ್ಣೇಗೌಡ, ಬಿಜಿಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಹದೇವು, ಪ್ರೌಢಶಾಲಾ ಮುಖ್ಯಶಿಕ್ಷಕ ರಘು ಸೇರಿದಂತೆ ಹಲವರು ಭಾಗವಹಿಸಿದ್ದರು.