

ಹುಬ್ಬಳ್ಳಿ: ತಾಲೂಕಿನ ಹೆಬಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಪ್ರಧಾನ ಗುರುಮಾತೆ ರತ್ನಾ ಗ್ರಾಮ ಪುರೋಹಿತ ಅವರು ವರ್ಗಾವಣೆಯಾಗಿದ್ದು, ಶುಕ್ರವಾರ ಶಾಲೆಯಿಂದ ತೆರಳುವ ವೇಳೆ ಮಕ್ಕಳು ಕಣ್ಣೀರು ಹಾಕಿದರು.
ಶಾಲೆಯಿಂದ ಹೊರಬರುತ್ತಿದ್ದಂತೆ ಮುತ್ತಿಗೆ ಹಾಕಿದ 250ಕ್ಕೂ ಹೆಚ್ಚು ಮಕ್ಕಳು, ಗುರುಮಾತೆಯನ್ನು ತಬ್ಬಿ ಕಣ್ಣೀರು ಸುರಿಸಿದರು. ನೀವು ಈ ಶಾಲೆ ಬಿಟ್ಟು ಹೋಗಬೇಡಿ, ಇಲ್ಲೇ ಇದ್ದು ಬಿಡಿ ಎಂದು ದುಂಬಾಲು ಬಿದ್ದರು. ಮಕ್ಕಳನ್ನು ಸಮಾಧಾನ ಪಡಿಸಿದ ಗುರುಮಾತೆ, ನಿಮ್ಮೊಟ್ಟಿಗೆ ಸದಾಕಾಲ ಇರುತ್ತೇವೆ. ಆಗಾಗ ನಿಮ್ಮನ್ನು ಬಂದು ಭೇಟಿಯಾಗುತ್ತೇನೆ ಎಂದು ಸಮಾಧಾನ ಹೇಳಿದರು.
ಸನ್ಮಾನ: ಕುಂದಗೋಳ ತಾಲೂಕಿನ ಹೊಸಹಂಚಿನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರತ್ನಾ ಗ್ರಾಮಪುರೋಹಿತ ಅವರು ವರ್ಗಾವಣೆಯಾಗಿದ್ದರಿಂದ ಶಿಕ್ಷಕರು ಸನ್ಮಾನಿಸಿ ಬೀಳ್ಕೊಟ್ಟರು. ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನ, ಎಸ್ಡಿಎಂಸಿ ಅಧ್ಯಕ್ಷ ಪುರದಪ್ಪ ಗಾಳಿ, ಉಪಾಧ್ಯಕ್ಷ ಅಶ್ವಿನಿ ಕೊಣ್ಣೂರ, ಸದಸ್ಯರಾದ ವೆಂಕಣ್ಣ ತಳವಾರ, ವೀಣಾ ಈಟಿ, ಕಾವೇರಿ ಅಕ್ಕಿ, ರಾಜೇಸಾಬ್ ನಾಯ್ಕರ, ಗಣ್ಯರಾದ ಮಲ್ಲಿಕಾರ್ಜುನ ಬಸರಿಕಟ್ಟಿ, ವಿಜಯಲಕ್ಷ್ಮೀ, ಇತರರಿದ್ದರು.