ಶಾಲೆಯತ್ತ ಓಡೋಡಿ ಬಂದ ಮಕ್ಕಳು

school
Published on

 ಕೋಲಾರ: ಶೈಕ್ಷಣಿಕ ವರ್ಷ ಶುಕ್ರವಾರದಿಂದ ಪ್ರಾರಂಭವಾಗಿದ್ದು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಅವರು ಕೆಲ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭವನ್ನು ಪರಿಶೀಲಿಸಿದರು.

ಮಕ್ಕಳಿಗೆ ಮೂಲ ಸೌಲಭ್ಯ, ಶೌಚಗೃಹ, ಶಾಲಾವರಣ ಸ್ವಚ್ಛತೆ, ವಿದ್ಯುತ್​ ವ್ಯವಸ್ಥೆ, ಕುಡಿಯುವ ನೀರು, ಮಧ್ಯಾಹ್ನ ಊಟದ ವ್ಯವಸ್ಥೆಯ ಬಗ್ಗೆ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು.

ಶಾಲಾರಂಭದ ಮೊದಲ ದಿನ ಶಾಲೆಗಳಲ್ಲಿ ನಡೆಸಿರುವ ಸಿದ್ಧತೆ, ಸಂಭ್ರಮದ ಕುರಿತು ಪರಿಶೀಲಿಸಲು ಮಿಂಚಿನ ಸಂಚಾರ ನಡೆಸಿ ಅವರು, ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳನ್ನು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಿಸಿದರು.

ಶೌಚಗೃಹ ಸ್ವಚ್ಛತೆ, ಅಡುಗೆ ಕೋಣೆ ಸುಸಜ್ಜಿತವಾಗಿರಬೇಕು, ಗ್ರಂಥಾಲಯ, ಪ್ರಾಯೋಗಾಲಯಗಳನ್ನು ಸುಸ್ಥಿತಿಯಲ್ಲಿಟ್ಟು, ಅದರ ಬಳಕೆ ಮಾಡಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಸಮಾಜದಲ್ಲಿನ ಕಟ್ಟಕಡೆಯ ಮಗುವಿಗೂ ಶಿಕ್ಷಣ ಕಲ್ಪಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದರ ಪ್ರಯೋಜನ ಪಡೆದುಕೊಂಡು ಮಕ್ಕಳಿಗೆ ವಿದ್ಯೆ ಕಲಿಸಲು ಪಾಲಕರು ದಾಖಲು ಮಾಡಬೇಕು ಎಂದು ಡಿಡಿಪಿಐ ಕೃಷ್ಣಮೂರ್ತಿ ಹೇಳಿದರು.

ಸರ್ಕಾರ ಶಾಲಾರಂಭದ ದಿನ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲು ಸೂಚಿಸಿದೆ, ಜತೆಗೆ ಶಾಲೆಗೆ ಬರುವ ಮಕ್ಕಳಿಗೆ ಇಲ್ಲಿ ಸಂಭ್ರಮದ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಕ್ರಮವಹಿಸಿದ್ದು, ಪಾಲಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಕು ಎಂದರು.

ಕೋಲಾರ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸ್ವಲ್ಪ ಸುಧಾರಣೆ ಕಂಡಿದ್ದರೂ, ನಿರೀಕ್ಷಿಸಿದಷ್ಟು ಸಾಧನೆಯಾಗಿಲ್ಲ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲಾರಂಭದಿಂದಲೇ ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಕಲಿಕೆಯಲ್ಲಿ ಹಿಂದುಳಿದ, ಸಾಧಾರಣ ಮತ್ತು ಕಲಿಕೆಯಲ್ಲಿ ಸಾಧಕ ಮಕ್ಕಳನ್ನು ಪಟ್ಟಿ ಮಾಡಿ, ಅವರ ಸಾಮರ್ಥ್ಯಕ್ಕೆ ತಕ್ಕಂತೆ ನಿಮ್ಮ ಬೋಧನಾ ವಿಧಾನ ಅಳವಡಿಸಿಕೊಳ್ಳಿ ಎಂದರು.

ಗ್ರಾಪಂ ಅಧ್ಯಕ್ಷೆ ರೇಣುಕಾಂಭ ಮುನಿರಾಜು ಮಾತನಾಡಿ, ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಗೆ ಬರುವ ಮಕ್ಕಳಿಗೆ ಗ್ರಾಮ ಪಂಚಾಯಿತಿಯಿಂದ ನಿರಂತರವಾಗಿ ಆಟೋ ಸೌಲಭ್ಯ ಒದಗಿಸಲು ಈಗಾಗಲೇ ಅಂಗೀಕಾರ ನೀಡಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಈ ಸೌಲಭ್ಯ ಸಿಗಲಿದೆ ಎಂದರು.

ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಸಿಆರ್​ಪಿ ಬಸವರಾಜ್​, ತಾಲೂಕಿನ ಪೆಮ್ಮಶೆಟ್ಟಿಹಳ್ಳಿ ಶಾಲೆ ಎಸ್​ಡಿಎಂಸಿ ಅಧ್ಯಕ್ಷ ಆಂಜಿನಪ್ಪ, ಶಿಕ್ಷಕರಾದ ಎಂ.ಆರ್​.ಗೋಪಾಲಕೃಷ್ಣ, ಭವಾನಿ, ಶ್ವೇತಾ,ಸುಗುಣಾ, ಫರೀದಾ, ವೆಂಕಟರೆಡ್ಡಿ, ಕೆ.ಲೀಲಾ, ಸಿ.ಎಲ್​.ಶ್ರೀನಿವಾಸಲು, ರಮಾದೇವಿ, ಡಿ.ಚಂದ್ರಶೇಖರ್​, ಪಾಲಕರಾದ ಶಾಂತಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net