

ಮೈಸೂರು: ಆಧುನಿಕ ಮತ್ತು ನಗರದ ಮಕ್ಕಳು ಧಾವಂತದ ಕಾಲದಲ್ಲಿ ಬದುಕುತ್ತಿದ್ದು, ಅವರಿಗೆ ಪರಂಪರೆಯ ಅರಿವಿಲ್ಲ ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಕಳವಳ ವ್ಯಕ್ತಪಡಿಸಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಡಾ.ಎನ್.ಕೆ. ಲೋಲಾಕ್ಷಿ ಅವರ ದೃಶ್ಯಕಾವ್ಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಂಪರೆಯ ಬೇರುಗಳ ಅರಿವಿಲ್ಲದ ಮಕ್ಕಳು ತಾಯಿಯಿಂದ ಪರಿತ್ಯಕ್ತಗೊಂಡ ಸ್ಥಿತಿಯಲ್ಲಿ ನರಳುತ್ತಿರುತ್ತಾರೆ. ಎಷ್ಟು ಶ್ರೀಮಂತಿಕೆ ಇದ್ದರೇನು ಪ್ರಯೋಜನ ಎಂದರು.
ಸಂಸ್ಕಾರ ಹೋಳಿಗೆಯಂತೆ. ಅದರೊಳಗಿನ ಹೂರಣ ಸಂಸ್ಕಾರ, ಸಂಸ್ಕೃತಿ. ಹೊರಗಿನ ಮೈದಾ ತೋರಣ- ಅದು ಹಣ, ಅಧಿಕಾರ, ಪದವಿಯ ಪ್ರತೀಕ. ತೋರಣ ಕೆಟ್ಟರೂ ಪರವಾಗಿಲ್ಲ ಹೂರಣ ಕೆಡದಂತೆ ನಾವೆಲ್ಲರೂ ಎಚ್ಚರವಹಿಸಬೇಕು. ನಮ್ಮೆಲ್ಲರ ಬದುಕು ಹೂವಿನಂತಾಗಬೇಕು. ಇದೇ ಜೀವನದ ಸಂಸ್ಕಾರ ಮತ್ತು ಸಂಸ್ಕೃತಿ ಎಂದು ವಿಶ್ಲೇಷಿಸಿದರು.
ನಿಸರ್ಗ ಸೌಂದರ್ಯ ಮಾತ್ರವಲ್ಲ. ಅದೆಲ್ಲ ನಮ್ಮೆಲ್ಲರ ಬದುಕಿನ ವ್ಯಕ್ತಿತ್ವದ ವಿಸ್ತಾರ. ನಮ್ಮ ಪರಂಪರೆಯಲ್ಲಿ ಮಹತ್ವದ ಮಾತೆಂದರೆ; ಹುಟ್ಟುತ್ತ ಮಾನವ, ಬೆಳೆಯುತ್ತ ಸಾಧಕನಾಗಿ ಕೊನೆಯಲ್ಲಿ ಬೆಳಕಾಗುವುದು. ಇದು ಭಗವಂತ ಮನುಷ್ಯನಿಗೆ ಕೊಟ್ಟಿರುವ ಮಹತ್ವದ ಸಂದೇಶ. ಬದುಕು ಬೆಳಕಾಗಬೇಕು. ಬದುಕು ಬಯಲಾಗಬೇಕು. ಇದೇ ಜೀವನ ಎಂದು ಹೇಳಿದರು.
ಯಂತ್ರ ನಾಗರಿಕತೆ ಮತ್ತು ಅಭಿವೃದ್ಧಿಶೀಲತೆಯ ಹೆಸರಿನಲ್ಲಿ ನಿಸರ್ಗದೊಂದಿಗಿನ ಕರುಳಬಳ್ಳಿ ಸಂಬಂಧವನ್ನು ಕಡಿದುಕೊಂಡು ಆರ್ಥಿಕ ಅವಿವೇಕತನದಲ್ಲಿ ಬದುಕುತ್ತಿರುವುದು ದೊಡ್ಡ ದುರಂತ. ಸಂತರು, ಶರಣರು ತಮ್ಮ ಬದುಕನ್ನು ನಿಸರ್ಗದೊಂದಿಗೆ ಏಕೀಕರಿಸಿಕೊಂಡಿದ್ದರು. ಈಗ ನಮ್ಮ ಬದುಕು ಪ್ರಕೃತಿಗೆ ವಿರುದ್ಧವಾಗಿದೆ. ಕಾಡು-ಮೇಡು, ವನ್ಯಪ್ರಾಣಿಗಳು ಇರುವ ತನಕ ಈ ಭೂಮಿ ಮನುಷ್ಯನಿಗೆ ಆಶ್ರಯ ನೀಡಬಲ್ಲದು ಎಂದು ನಮ್ಮ ಪೂರ್ವಿಕರ ಮೌಲಿಕವಾದ ಮಾತು. ಇದನ್ನು ನಾವೆಲ್ಲರೂ ತಾತ್ವಿಕ, ಸಾತ್ವಿಕ, ಭಾವನಾತ್ಮಕವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನೆಲ, ನೆಲೆಯ ಬಗ್ಗೆ ಅಭಿಮಾನ ಇರಿಸಿಕೊಳ್ಳಬೇಕು. ಅಭಿಮಾನ ಅಂದರೆ ಅಹಂಕಾರ ಅಲ್ಲ. ನೆಲದೊಂದಿಗೆ ತಾಧ್ಯಾತ್ಮ. ಇದೊಂದು ಮೌಲ್ಯ. 15ನೇ ಶತಮಾನದ ಶಿಕಾರಿಪುರದ ಶಾಂತನಾಥ ಶಿವಯೋಗಿಗಳು- ಗಗನದ ವ್ಯಾಪ್ತಿಗಿಂತ ಅಭಿಮಾನ ದೊಡ್ಡದು ಎಂದಿದ್ದರು. ಪ್ರತಿಯೊಬ್ಬರೂ ನೆಲ, ಜಲ, ಪರಂಪರೆಯನ್ನು ತಮ್ಮ ಹೃದಯದಲ್ಲಿ ಸ್ಥಾಪಿಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ತಾಯಿಯ ಅಂತಃಕರಣಕ್ಕೆ ಹೆಸರುವಾಸಿ. ತಾಯಿ ನಾಡು ಮೂರು ಲೋಕಕ್ಕಿಂತಲೂ ದೊಡ್ಡದು. ಇದು ನಮ್ಮ ಬದುಕಿನ ಅಭಿವ್ಯಕ್ತಿ ಮತ್ತು ರೂಪಕವಾಗಬೇಕು. ಸಾಹಿತ್ಯ ಪರಂಪರೆ ಒಳಗೊಳ್ಳುವ ಪರಂಪರೆಯಾಗಿದೆ. ಇದನ್ನು ಅರಿಯಬೇಕು ಎಂದು ಸಲಹೆ ನೀಡಿದರು.
ನಟಿ ಅಖಿಲಾ ತಾಂಡೂರು ದೃಶ್ಯಕಾವ್ಯ ಲೋಕಾರ್ಪಣೆ ಮಾಡಿದರು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿ ಪೊಲೀಸ್ ಅಧೀಕ್ಷಕಿ ಡಾ.ಬಿ.ಟಿ.ಕವಿತಾ ಅವರನ್ನು ಸನ್ಮಾನಿಸಲಾಯಿತು.
ಪ್ರಾಧ್ಯಾಪಕಿ ಡಾ.ಎನ್.ಕೆ. ಲೋಲಾಕ್ಷಿ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಡಾ.ಬಿ.ವಿ. ವಸಂತಕುಮಾರ್, ಕಾಲೇಜಿನ ಸಾಂಸ್ಕೃತಿಕ ವೇದಿಕೆ ಅಧ್ಯಾಪಕ ಕಾರ್ಯದರ್ಶಿ ಎಂ.ನಂಜುಂಡಯ್ಯ, ಖಜಾಂಚಿ ಅಶ್ವಿನಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ರಕ್ಷಿತಾ, ಕಾರ್ಯದರ್ಶಿ ಜೆ.ಎಸ್.ಜೇನುಶ್ರೀ ಪಾಲ್ಗೊಂಡಿದ್ದರು.