ಸಮರ್ಥನಂ ಸಂಭ್ರಮದಲ್ಲಿ ನಲಿದ ಮಕ್ಕಳು: ಹಿರಿಯ ಚಿತ್ರನಟ ಶಿವರಾಂ ಭಾಗಿ, ಸಾಂಸ್ಕೃತಿಕ ಚಟುವಟಿಕೆಗಳ ರಂಗು

samarthanam
Published on

ಬೆಂಗಳೂರು: ಎತ್ತ ನೋಡಿದರತ್ತ ವಿವಿಧ ಬಣ್ಣಗಳಿಂದ ಕಂಗೊಳಿಸುವ ರಂಗೋಲಿಗಳ ಸಾಲು, ತಳಿರು ತೋರಣಗಳಿಂದ ಸಿಂಗಾರಗೊಂಡ ಸಭಾಂಗಣ, ವಿವಿಧ ರಾಜ್ಯಗಳ ಸಾಂಸ್ಕೃತಿಕ ಉಡುಗೆ ತೊಡುಗೆಗಳಲ್ಲಿ ಮಿಂಚಿದ ಮಕ್ಕಳ  ದಂಡು... ಎಚ್​ಎಸ್​ಆರ್ ಲೇಔಟ್​ನ ಸಮರ್ಥನಂ ಟ್ರಸ್ಟ್​ನ 23ನೇ ವಾರ್ಷಿಕೋತ್ಸವ ದಲ್ಲಿ ಕಂಡುಬಂದ ವಾತಾವರಣವಿದು.

ಬೆಳಗ್ಗೆಯಿಂದಲೇ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ಅಂಗವಿಕಲ ಮಕ್ಕಳು ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗೀತೆಗಳು ಹಾಗೂ ಜಾನಪದ ಗೀತೆಗಳಿಗೆ ನೃತ್ಯ ಮಾಡಿ ಸಭಿಕರನ್ನು ನಿಬ್ಬೆರಗಾಗಿಸಿದರು. 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.

ಸಂಗೀತ, ಕಾವ್ಯವಾಚನ, ಗೀತಗಾಯನ, ಜಾನಪದ ನೃತ್ಯ, ಭರತನಾಟ್ಯ, ಮಿಮಿಕ್ರಿ- ಹೀಗೆ ವಿವಿಧ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದ ವೇದಿಕೆಯಲ್ಲಿ ಸುನಾದ ಸಂಸ್ಥೆಯಿಂದ ತರಬೇತಿ ಪಡೆದ ಅಂಗವಿಕಲ ಮಕ್ಕಳು ಕಲಾಪ್ರೌಢಿಮೆ ಮೆರೆದರು. ವೇದಿಕೆ ಮೇಲೆ ಮಾರ್ಜಾಲ ನಡಿಗೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ 350ಕ್ಕೂ ಅಧಿಕ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಳೆದ ವರ್ಷ ‘ಅಲ್ಟ್ರಾ ಮ್ಯಾರಥಾನ್’ನಲ್ಲಿ ಮೈಸೂರಿನಿಂದ ಬೆಂಗಳೂರುವರೆಗೆ ಮೂರು ದಿನಗಳಲ್ಲಿ ಓಡಿ ಗಿನ್ನೆಸ್ ದಾಖಲೆ ನಿರ್ವಿುಸಿದ್ದ ಆರು ಯುವತಿಯರಿಗೆ ದಾಖಲೆ ಬುಕ್ ಹಸ್ತಾಂತರಿಸಲಾಯಿತು.

ಹಿರಿಯ ನಟ ಶಿವರಾಂ, ಸಂಸ್ಥೆಗೆ ದೇಣಿಗೆ ನೀಡುತ್ತಿರುವ 30ಕ್ಕೂ ಅಧಿಕ ಕಂಪನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

23 ವರ್ಷಗಳಿಂದ ಅಂಗವಿಕಲ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿ ಸುತ್ತಿದ್ದೇವೆ. ದೇಶದ ವಿವಿಧೆಡೆ 15 ಮತ್ತು ಅಮೆರಿಕ ಹಾಗೂ ಇತರೆಡೆ ಎರಡು ಕೇಂದ್ರ ತೆರೆದಿದ್ದೇವೆ. 2030ರೊಳಗೆ 30 ಲಕ್ಷ ಅಂಗವಿಕಲರಿಗೆ ಸೌಲಭ್ಯಗಳನ್ನು ಒದಗಿಸುವ ಗುರಿ ನಮ್ಮದು. | ಜಿ.ಕೆ. ಮಹಾಂತೇಶ್ ಸಮರ್ಥನಂ ಸಂಸ್ಥೆ ಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net