ಹೂಟಗಳ್ಳಿಯ ರೋಟರಿ ಮಿಡ್‌ಟೌನ್ ಅಕಾಡೆಮಿ ಶಾಲೆಯ ಮಕ್ಕಳಿಗೆ ಪರೇಷನ್ ಸಿಂಧೂರವನ್ನು ಸಂಕೇತಿಸುವ ತಿಲಕ ಹಚ್ಚಿ ಸ್ವಾಗತ

18
Published on

ಮೈಸೂರು: ಹೂಟಗಳ್ಳಿಯ ರೋಟರಿ ಮಿಡ್‌ಟೌನ್ ಅಕಾಡೆಮಿ ಶಾಲೆಯಲ್ಲಿ ಶುಕ್ರವಾರ ಶಾಲೆ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ವಿಭಿನ್ನವಾಗಿ ಸ್ವಾಗತ ಕೋರುವ ಮೂಲಕ ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು.

ಬೇಸಿಗೆ ರಜೆ ಮುಗಿಸಿ ಮೊದಲ ಶಾಲಾ ದಿನದಂದು ನಗುಮೊಗದಿಂದ ಬಂದ ಚಿಣ್ಣರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಶಾಲಾ ಆರಂಭೋತ್ಸವದ ಜತೆಗೆ ಆಪರೇಷನ್ ಸಿಂಧೂರ ವಿಜಯೋತ್ಸವವನ್ನು ಆಚರಿಸಲಾಯಿತು. ಆಪರೇಷನ್ ಸಿಂಧೂರವನ್ನು ಸಂಕೇತಿಸುವ ಸಿಂಧೂರವನ್ನು ಮಕ್ಕಳಿಗಿಟ್ಟು ಬರ ಮಾಡಿಕೊಳ್ಳಲಾಯಿತು. ದೇಶದ ಸೈನಿಕರು, ಅವರ ಸಾಹಸ ಹಾಗೂ ದೇಶದ ಸಾಮರ್ಥ್ಯದ ಬಗ್ಗೆ ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಮೂಡಿಸಲಾಯಿತು.

ಪ್ರಾಂಶುಪಾಲ ಎಂ.ಆತ್ಮಾನಂದ ಮಾತನಾಡಿ, ಶಿಕ್ಷಕರು ಹೇಳುವ ಪಾಠವನ್ನು ಶ್ರದ್ಧೆಯಿಂದ ಕಲಿತು ವಿದ್ಯಾವಂತರಾಗಬೇಕು. ತಂದೆ-ತಾಯಿ ಮಾರ್ಗ ದರ್ಶನದಂತೆ ನಡೆದು ಓದಿದ ಶಾಲೆಗೆ ಹಾಗೂ ಗುರುಗಳಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ದೇಶದ ಭವಿಷ್ಯದ ಅಡಿಗಲ್ಲು. ಹಾಗಾಗಿ ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಿ ಶಾಲೆಗೆ ಕೀರ್ತಿ ತರಬೇಕು ಎಂದರು.

ವಿಜಯವಾಣಿ ಮೈಸೂರು ಪತ್ರಿಕೆ ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಮಾತನಾಡಿ, ಜೀವನದಲ್ಲಿ ಶಿಕ್ಷಣದ ಮಹತ್ವ ಅಪಾರ. ಇದು ಜನರು ತಮ್ಮ ಜೀವನದುದ್ದಕ್ಕೂ ಗುಣಮಟ್ಟದ ಕಲಿಕೆಯನ್ನು ಸುಗಮಗೊಳಿಸುತ್ತದೆ. ಇದು ಜ್ಞಾನ, ನಂಬಿಕೆ, ಕೌಶಲ, ಮೌಲ್ಯ ಮತ್ತು ನೈತಿಕ ಅಭ್ಯಾಸಗಳನ್ನು ಕಲಿಸುತ್ತದೆ. ಇದು ಜೀವನ ವಿಧಾನವನ್ನು ಸುಧಾರಿಸುತ್ತದೆ, ವ್ಯಕ್ತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಹೆಚ್ಚಿಸುತ್ತದೆ ಎಂದರು.

ಇದೇ ವೇಳೆ ಖ್ಯಾತ ಕವಿ ಎಚ್.ಎಸ್.ವೆಂಕಟೇಶ್‌ಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಮುಖ್ಯಶಿಕ್ಷಕಿ ಸರಳಾ, ನಿವೇದಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net