

ಹನೂರು: ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಳೇರಿಪಾಳ್ಯ ಗ್ರಾಮಕ್ಕೆ ಸೋಮವಾರ ಅಧಿಕಾರಿಗಳ ತಂಡ ಭೇಟಿ ನೀಡಿ ವಿಜಯಪುರ ಜಿಲ್ಲೆಯಿಂದ ಬಂದಿರುವ ಕೂಲಿ ಕಾರ್ಮಿಕರಿಗೆ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಮನವೊಲಿಸಿತು.
ಸೂಳೇರಿಪಾಳ್ಯ ಭಾಗದಲ್ಲಿ ಒಂದು ತಿಂಗಳಿನಿಂದಲೂ ನಡೆಯುತ್ತಿರುವ ಕಬ್ಬು ಕಟಾವಿಗೆ ವಿಜಯಪುರ ಜಿಲ್ಲೆಯಿಂದ ಸುಮಾರು 10ಕ್ಕೂ ಹೆಚ್ಚು ಕೂಲಿ ಕಾರ್ಮಿಕ ಕುಟುಂಬಗಳು ಮಕ್ಕಳೊಂದಿಗೆ ಆಗಮಿಸಿದ್ದು, ಅಲ್ಲಲ್ಲಿ ಟೆಂಟ್ ನಿರ್ಮಿಸಿಕೊಂಡು ಬಿಡಾರ ಹೂಡಿದ್ದಾರೆ. ಇದರಲ್ಲಿ ಪುಟಾಣಿಗಳು ಟೆಂಟ್‌ನಲ್ಲಿಯೇ ಕಾಲ ಕಳೆದರೆ, ವಿದ್ಯಾರ್ಥಿಗಳು ಕೂಲಿ ಕೆಲಸದಲ್ಲಿ ಪಾಲಕರಿಗೆ ಸಹಾಯ ಮಾಡುತ್ತಿದ್ದು, ಶಿಕ್ಷಣದಿಂದ ವಂಚಿತರಾಗಿದ್ದರು. ಈ ಬಗ್ಗೆ ಸ್ಥಳೀಯರು ಮಕ್ಕಳ ಸಹಾಯವಾಣಿ ಹಾಗೂ ಬಾಲಕಾರ್ಮಿಕ ಯೋಜನಾ ಸೊಸೈಟಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಮಹೇಶ್, ತಾಲೂಕು ಕಾರ್ಮಿಕ ಅಧಿಕಾರಿ ಪ್ರಸಾದ್, ಮಕ್ಕಳ ಸಹಾಯವಾಣಿ ಕಾರ್ಯಕರ್ತೆ ಮಂಗಳಮ್ಮ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಪುಟಾಣಿಗಳು ಹಾಗೂ ಶಾಲಾ ಮಕ್ಕಳು ಇರುವುದು ದೃಢಪಟ್ಟಿತ್ತು. ಬಳಿಕ ಕೆಲಸ ನಿರ್ವಹಿಸುತ್ತಿದ್ದ ಜಮೀನಿಗೆ ತೆರಳಿದ ಅಧಿಕಾರಿಗಳ ತಂಡ ಕೂಲಿ ಕಾರ್ಮಿಕರನ್ನು ಮನವೊಲಿಸಿತು. 6 ಮಕ್ಕಳು ಪ್ರೌಢಶಾಲೆ, ಒಬ್ಬ ಪ್ರಾಥಮಿಕ ಶಾಲೆಗೆ ಹಾಗೂ ಮೂವರು ಪುಟಾಣಿಗಳನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಮಹೇಶ್, ಶಿಕ್ಷಕ ವೆಂಕಟರಾಜು, ಗ್ರಾಪಂ ಅಧ್ಯಕ್ಷ ರುದ್ರನಾಯಕ, ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಇನ್ನಿತರರು ಇದ್ದರು.