ಮಕ್ಕಳ ಪೌಷ್ಟಿಕತೆ ವೃದ್ಧಿಗೆ ಚಾಕ್ಲೆಟ್

05
Published on

ಚಿಕ್ಕೋಡಿ: ಅಂಗನವಾಡಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಪೌಷ್ಟಿಕಾಂಶಯುಕ್ತ ಪೌಡರ್ ಒಳಗೊಂಡ ಚಾಕ್ಲೆಟ್‌ಅನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದಾರೆ.

ಪಟ್ಟಣದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಅಂಗನವಾಡಿ ಮಕ್ಕಳಿಗೆ ವಿತರಿಸಲು ಪೌಷ್ಟಿಕ ಪೌಡರ್‌ಯುಕ್ತ ಚಾಕ್ಲೆಟ್
ಬಾಕ್ಸ್‌ಅನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಬುಧವಾರ ವಿತರಿಸಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಮಕ್ಕಳಿಗೆ 100 ಗ್ರಾಂ ಪೌಷ್ಟಿಕ ಪೌಡರ್ ಒಳಗೊಂಡ ಚಾಕ್ಲೆಟ್ ನೀಡಲಾಗಿದೆ ಎಂದರು.

ಹೈದರಾಬಾದ್‌ನ ಮಹಿಂದ್ರಾ ಕಂಪನಿಯಿಂದ 1.5 ಕೋಟಿ ರೂ. ವೆಚ್ಚದಲ್ಲಿ ಪೌಷ್ಟಿಕಾಂಶಯುಕ್ತ ಚಾಕ್ಲೆಟ್ ತಯಾರಿಸ ಲಾಗಿದೆ. ನ್ಯೂಟ್ರಿಮಿಕ್ಸ್ ಅಗ್ರೋಕ್ರಾಪ್ ಎಂಬ ಪೌಷ್ಟಿಕ ಆಹಾರವನ್ನು ಚಾಕ್ಲೆಟ್ ರೂಪದಲ್ಲಿ ಮಕ್ಕಳಿಗೆ ನೀಡಲಾಗುವುದು. ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಈ ಪೌಷ್ಟಿಕ ಆಹಾರ ಸಹಕಾರಿಯಾಗಲಿದೆ. 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಪ್ರಾಯೋಗಿಕವಾಗಿ ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ವಿತರಿಸಲಾಗುತ್ತಿದೆ. ಒಳ್ಳೆಯ ಫಲಿತಾಂಶ ಬಂದರೆ ಈ ಯೋಜನೆಯನ್ನು ರಾಜ್ಯಾದ್ಯಂತ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾರಕ ಕರೊನಾ ಇಂದು ವಿಶ್ವದ ನಿದ್ದೆಗೆಡಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಎಚ್ಚರ ವಹಿಸುವುದು ಅತೀ ಅಗತ್ಯವಾಗಿದೆ ಎಂದರು. ಎಸಿ ರವೀಂದ್ರ ಕರಲಿಂಗನವರ ಮಾತನಾಡಿದರು. ಜಗದೀಶ ಕವಟಗಿಮಠ, ಸುಭಾಷ ಸಂಪಗಾವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net