ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲೇ ವ್ಯವಹಾರ ಜ್ಞಾನ ಕಲಿಕೆ ಅಗತ್ಯ

13 HRS 01
ಹಿರೀಸಾವೆ ಹೋಬಳಿ ದಿಡಗ ಗ್ರಾಮದ ಹೊಯ್ಸಳ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಸೋಮವಾರ ಮಕ್ಕಳ ಸಂತೆ ನಡೆಯಿತು.
Published on

ಹಿರೀಸಾವೆ: ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ವ್ಯವಹಾರ ಜ್ಞಾನ ಕಲಿಸುವ ಅಗತ್ಯವಿದೆ ಎಂದು ಹೊಯ್ಸಳ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಮೆಡಿಕಲ್ ರಾಮೇಗೌಡ ಹೇಳಿದರು.

ಹೋಬಳಿಯ ದಿಡಗ ಗ್ರಾಮದ ಹೊಯ್ಸಳ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ಸಂತೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅತಿ ವೇಗದಲ್ಲಿ ಸಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಶಿಕ್ಷಣದ ಜತೆಗೆ ವ್ಯವಹಾರ ಹಾಗೂ ಸಾಮಾನ್ಯ ಜ್ಞಾನ ಅತ್ಯಗತ್ಯವಿದೆ. ವಸ್ತುಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ಬಗ್ಗೆ ಸಾಕಷ್ಟು ಅರಿವು ಇರಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಬದುಕುವುದು ಕಷ್ಟಕರವಾಗಲಿದೆ ಎಂದು ತಿಳಿಸಿದರು.

ಹಣ ಸಂಪಾದಿಸುವುದು ಎಷ್ಟು ಮುಖ್ಯವೋ ಅಷ್ಟೇ ಮಿತ ವ್ಯಯದೊಂದಿಗೆ ಉಳಿತಾಯ ಮಾಡುವ ಸಾಮಾನ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸದ್ಯದ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಯಾವುದೇ ವಸ್ತುಗಳು ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.

ಆವರಣದಲ್ಲಿ ಸೊಪ್ಪು-ತರಕಾರಿ, ಬಾಳೆಹಣ್ಣು, ಕಲ್ಲಂಗಡಿ ಹಾಗೂ ಅವರೆಕಾಯಿ ವ್ಯಾಪಾರ ಜೋರಾಗಿಯೇ ನಡೆಯಿತು. ಜತೆಗೆ ಪಾನೀಪುರಿ, ಚುರುಮುರಿ, ಹೋಳಿಗೆ, ಚಕ್ಕುಳಿ, ನಿಪ್ಪಟ್ಟು, ರವೆ ಉಂಡೆ, ಕೊಬ್ಬರಿ ಮಿಠಾಯಿ ಹಾಗೂ ಫ್ರೂಟ್ ಸಲಾಡ್ ಸೇರಿದಂತೆ ವಿವಿಧ ಖಾದ್ಯಗಳು ಗ್ರಾಹಕರ ಬಾಯಲ್ಲಿ ನೀರು ಬರಿಸಿದ್ದು ಖರೀದಿಸಿ ಸವಿದರು.

ಸಂಸ್ಥೆ ಅಧ್ಯಕ್ಷೆ ಟಿ.ಆರ್.ರಂಜಿತಾ, ಎಪಿಎಂಸಿ ಮಾಜಿ ಅಧ್ಯಕ್ಷ ರಘುರಾಮ್, ಹೊಯ್ಸಳ ಹಿರಿಯ ಶಾಲೆ ಮುಖ್ಯಶಿಕ್ಷಕ ಬಿ.ಎಚ್.ನಂದೀಶ್, ಸಹಶಿಕ್ಷಕರಾದ ಪುಟ್ಟೇಗೌಡ, ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net