

ಲೋಕಾಪುರ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವುದು ಪ್ರತಿಯೊಬ್ಬ ಪಾಲಕರ ಮುಖ್ಯ ಜವಾಬ್ದಾರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ ಹೇಳಿದರು.
ಪಟ್ಟಣದ ವಿದ್ಯಾಚೇತನ ಶಿಕ್ಷಣ ಸಂಸ್ಥೆಯ ವಿದ್ಯಾಚೇತನ ಸಂಭ್ರಮ-2025 ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿದ ಮಾತನಾಡಿದ ಅವರು, ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಎಲ್ಲ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜಮುಖಿ ಯಾಗುವಂತೆ ಪಾಲಕರು ಪ್ರಯತ್ನಿಸಬೇಕು. ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ದಾನೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಮೇಶ ಪಂಚಕಟ್ಟಿಮಠ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮೌಲ್ಯಯುತ ಶಿಕ್ಷಣ ನೀಡಿ, ವಿದ್ಯಾರ್ಥಿಗಳು ತಮಗೆ ಲಭಿಸಿದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಬಿಆರ್‌ಪಿ ಸಂಗಮೇಶ ನೀಲಗುಂದ ಮಾತನಾಡಿ, ವಿದ್ಯೆ ಎಂಬುದು ಯಾರು ದೋಚಲಾಗದ ಸ್ವತ್ತು. ಬಹಳಷ್ಟು ಸಮೃದ್ಧವಾಗಿ ಬೆಳೆಯುವ, ಎಲ್ಲ ಸಂಪತ್ತಿಗಿಂತ ಮಿಗಿಲು. ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ ಮಕ್ಕಳ ಜ್ಞಾನ ಭಂಡಾರದ ಶ್ರೀಮಂತಿಕೆ ಹೆಚ್ಚಿಸಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘಟನಾ ಕಾರ್ಯದರ್ಶಿ ರಮೇಶ ನಿಡೋಣಿ, ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ತಲ್ಲೂರ, ಜಿಲ್ಲಾ ಗಣರಾಜ್ಯೋತ್ಸವದ ಪತ್ರಿಕೋಧ್ಯಮ ಪ್ರಶಸ್ತಿ ಪುರಸ್ಕೃತ ಸಲೀಮ ಕೊಪ್ಪದ, ಅಂಜುಮಾನ ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಡೋಂಗ್ರಿ ಮಹಾಲಿಂಗಾಪುರ ಅವರನ್ನು ಸನ್ಮಾನಿಸಲಾಯಿತು.
ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಿಆರ್‌ಪಿ ಗಂಗಾಧರ ಗಾಣಿಗೇರ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಆನಂದ ಪೂಜಾರಿ, ಕಜಾಪ ತಾಲೂಕು ಘಟಕದ ಅಧ್ಯಕ್ಷ ರಮೇಶ ಅರಕೇರಿ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆಯೇಷಾ ರಾಮದುರ್ಗ, ಸಂಸ್ಥೆಯ ಸಂಸ್ಥಾಪಕ ಎಸ್.ಎಂ. ರಾಮದುರ್ಗ, ಮುಗು ವಿವೇಕ ಮರಾಠಿ ಇದ್ದರು.