

ಶ್ರೀನಿವಾಸಪುರ: ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಬೇಕು. ಶಿಸ್ತು ಇದ್ದರೆ ಮಾತ್ರ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಭವಿಷ್ಯರೂಪಿಸಿಕೊಳ್ಳಲು ಸಾಧ್ಯ ಎಂದು ಡಿಡಿಪಿಐ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ತ್ಯಾಗರಾಜ ಬಡವಾಣೆಯ ಸರ್ಕಾರಿ ಉನ್ನತಿಕರಣ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಮ್ಮ ಶಾಲೆ, ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಇದಕ್ಕೆ ಪಾಲಕರ ಸಹಕಾರವೂ ಅಗತ್ಯ. ಮಕ್ಕಳ ಚಟುವಟಿಕೆಗಳ ಮೇಲೆ ಶಿಕ್ಷಕರು ಹಾಗೂ ಪಾಲಕರು ನಿಗಾವಹಿಸಬೇಕು ಎಂದರು.
ಶಾಲೆಯ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ದಾನಿಗಳು, ಹಳೇ ವಿದ್ಯಾರ್ಥಿಗಳ ಸಂಘಗಳ ಸಹಾಯ ಪಡೆಯಬೇಕು.
ಅಲ್ಲದೇ ಶಾಲೆಗೆ ಸಂಬಂದಿಸಿದಂತೆ ಕುಂದುಕೊರತೆ ಹಾಗೂ ಶೈಕ್ಷಣಿಕ ವಿಚಾರವಾಗಿ ಪಾಲಕರಿಗೆ ಅರ್ಜಿ ನೀಡಬೇಕು ಎಂದರು.
ತ್ಯಾಗರಾಜ ಬಡವಾಣೆಯ ಶಾಲೆ ಉತ್ತಮ ಶೈಕ್ಷಣಿಕ ವಾತವರಣ ಹೊಂದಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ, ಶಾಲೆಯ ಸಮಸ್ಯೆಗಳನ್ನು ಬಗೆಹರಿಸಲಾಗುವುದು, ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಪಾಲಕರು ಸಹ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಮಧ್ಯಾಹ್ನದ ಬಿಸಿಯೂಟ ಸೇರಿ ಸರ್ಕಾರದ ಸೌಲಭ್ಯಗಳ ಬಗ್ಗೆ ಪರಿಶೀಲಿಸಬೇಕು. ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗಲೇ ಮಕ್ಕಳು ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದರು.
ಈಗಿರುವ ಶಾಲೆಗಳಲ್ಲಿಯೇ ಶಿಕ್ಷಕರು ಕಾರ್ಯನಿರ್ವಹಿಸಿ, ಮುಂದಿನ ದಿನಗಳಲ್ಲಿ ವರ್ಗಾವಣೆಯ ಪ್ರಾರಂಭವಾಗುತ್ತಿದೆ. ಆದರೆ ಅವು ಕಾರ್ಯಗತವಾಗಬೇಕಾದರೆ 2 ತಿಂಗಳ ಸಮಯಾವಕಾಶ ಬೇಕು. ಆದ್ದರಿಂದ ಇರುವ ವ್ಯವಸ್ಥೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುವಂತೆ ನಿರ್ದೇಶಿಸಲು ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬಿಇಒ ಬಿ.ಸಿ.ಮುನಿಲಕ್ಷ$್ಮಯ್ಯ ಮಾತನಾಡಿ, ಅಕ್ಷರದಾಸೋಹಕ್ಕೆ ಸಂಬಂಧಿಸಿದಂತೆ 35 ಶೈಕ್ಷಣಿಕ ಜಿಲ್ಲೆಗಳಿದ್ದು, ಅದರಲ್ಲಿ 204 ವಲಯ, 408 ಕಾರ್ಯಕ್ರಮಗಳಲ್ಲಿ ತಾಲೂಕಿನಲ್ಲಿ(ಮೇ 16ರಂದು ಲಕ್ಷಿ$್ಮಪುರ ಸರ್ಕಾರಿ ಶಾಲೆಯಲ್ಲಿ) ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಂತ ಹೆಚ್ಚು ಶೈಕ್ಷಣಿಕ ಪ್ರಗತಿ ಕಾಣುತ್ತಿವೆ. ವಿದ್ಯಾರ್ಥಿಗಳಿಗಾಗಿ ಅನೇಕ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಯುಕೆಜಿ, ಎಲ್ಕೆಜಿ, ಒಂದನೇ ತರಗತಿಗೆ ಉಚಿತ ಪ್ರವೇಶಾತಿ ಕಲ್ಪಿಸಲಾಗಿದೆ. ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ವಿತರಣೆ, ಕಂಪ್ಯೂಟರ್ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ ಸೇರಿ ಎಲ್ಲ ಸೌಕರ್ಯಗಳು ಸರ್ಕಾರಿ ಶಾಲೆಗಳಲ್ಲಿದ್ದು, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಎಸ್ಡಿಎಂಸಿ ಅಧ್ಯಕ್ಷ ಆನಂದ್, ಸದಸ್ಯ ನರಸಿಂಹಮೂರ್ತಿ, ಸಿಆರ್ಪಿಗಳಾದ ರಾಧಕೃಷ್ಣ, ಚೆನ್ನಪ್ಪ, ಮಂಜುನಾಥರೆಡ್ಡಿ, ಬಿಆರ್ಪಿಗಳಾದ ನಾಗೇಂದ್ರ ಪ್ರಸಾದ್, ವೆಂಕಟಾಚಲಪತಿ, ಉರ್ದು ಭಾಷೆಯ ಸಿಆರ್ಪಿಗಳಾದ ಆರೀಫ್ಪಾಷ, ನಾಜೀಮಾಬೇಗಂ, ಇಸಿಒ ಸುಬ್ರಮಣಿ ಹಾಗೂ ಪಾಲಕರು ಇದ್ದರು.