ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು

Swarnavallee
Published on

ಹೊನ್ನಾವರ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಂಸ್ಕಾರಯುತ ಸಮಾಜ ನಿರ್ಮಾಣದ ಜವಾಬ್ದಾರಿ ಪಾಲಕರ ಮೇಲಿದೆ. ಆಧ್ಯಾತ್ಮಿಕ ಒಲವು ಸಂಸ್ಕಾರಯುತ ಮನುಷ್ಯನನ್ನು ರೂಪಿಸುತ್ತದೆ ಎಂದು ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

ತಾಲೂಕಿನ ಅಡಕಾರದಲ್ಲಿ ರಾಮಕ್ಷತ್ರಿಯ ಸಂಘ ಹಾಗೂ ಸ್ವರ್ಣವಲ್ಲೀ ರಾಮಕ್ಷತ್ರಿಯ ಪರಿಷದ್ ಆಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ದೊರೆತರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪಗೊಳ್ಳಲು ಸಾಧ್ಯ. ಹಾಗೆಯೇ ಉಪನಯನವನ್ನು ಕೂಡ ಚಿಕ್ಕ ವಯಸ್ಸಿನಲ್ಲಿ ಮಾಡುವುದರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ. ಭಗವದ್ಗೀತೆ, ರಾಮರಕ್ಷಾ ಸ್ತೋತ್ರ ಮತ್ತು ರಾಮತಾರಕ ಮಂತ್ರಗಳ ಪಠಣ ಮಾಡುವುದನ್ನು ಮಕ್ಕಳಿಗೆ ರೂಢಿಸಿದರೆ ಆಧ್ಯಾತ್ಮಿಕ ಒಲವು ಮೂಡಲು ಸಾಧ್ಯ ಎಂದರು.

ರಾಮಕ್ಷತ್ರಿಯ ಪರಿಷದ್ ಅಧ್ಯಕ್ಷ ಎಸ್.ಕೆ.ನಾಯ್ಕ ಮಾತನಾಡಿದರು. ರಾಮಕ್ಷತ್ರಿಯ ಸಮಾಜದ 33 ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು. ಮಲ್ಲಿಕಾರ್ಜುನ ಸಿಲ್ಕ್ ಮಾಲೀಕ ರತ್ನಾಕರ ನಾಯ್ಕ ಅವರು ವಟುಗಳಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಿದರು. ಎಸ್.ಕೆ. ನಾಯ್ಕ ಮತ್ತು ಶ್ರೀನಿವಾಸ ನಾಯ್ಕ ಮುಂಬಯಿ ಅವರನ್ನು ಅಡಕಾರ ಸಂಘದಿಂದ ಸನ್ಮಾನಿಸಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಪ್ರಮೋದ ನಾಯ್ಕ ಸ್ವಾಗತಿಸಿದರು. ಸೀತಾರಾಮ ನಾಯ್ಕ ಹಳದಿಪೂರ ಪ್ರಾರ್ಥಿಸಿದರು. ಅಡಕಾರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರಾಮದಾಸ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಾಜೇಶ ಸಾಳೇಹಿತ್ತಲ್ ವರದಿ ವಾಚಿಸಿದರು. ರವಿ ನಾಯ್ಕ ನಿರ್ವಹಿಸಿದರು. ಮಹೇಶ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net