ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಅಗತ್ಯ

blm
Published on

ಕಾರ್ಕಳ: ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಬದುಕನ್ನು ನಡೆಸಬೇಕಾಗಿದೆ. ಅದರೊಂದಿಗೆ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಜೊತೆಗೆ ಪ್ರೀತಿಯಿಂದ ಮಾತನಾಡಬೇಕು, ಆ ಮೂಲಕ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಹಾಗೂ ವಾಗ್ಮಿ ಮುನಿರಾಜ ರೆಂಜಾಳ ಹೇಳಿದರು.

ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಆರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉದ್ಯಮಿ ವಿವೇಕಾನಂದ ಶೆಣೈ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪಡುವ ಪರಿಶ್ರಮದ ಬಗ್ಗೆ ಪಾಲಕರು ಅರಿತುಕೊಳ್ಳಬೇಕು. ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜು ಕಾರ್ಕಳಕ್ಕೆ ಮಾದರಿ ಸಂಸ್ಥೆಯಾಗಿದೆ ಎಂದರು.

ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಹಾಲಿ ಅಧ್ಯಕ್ಷ ಪ್ರಕಾಶ್ ಡಿಸೋಜ, ಸಂಸ್ಥೆಯ ವಿದ್ಯಾರ್ಥಿ ಆಪ್ತ ಸಮಾಲೋಚಕ ಡಾ.ಸಿಸ್ಟರ್ ಶಾರ್ಲೆಟ್ ಸಿಕ್ವೇರಾ ಶುಭ ಹಾರೈಸಿದರು. ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನೀಟ್ ಸಂಯೋಜಕ ಹಾಗೂ ಜೀವಶಾಸ್ತ್ರ ವಿಭಾಗ ಮುಖ್ಯಸ್ಥ ಮೌನೇಶ್ವರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೇ ರ‌್ಯಾಂಕ್, ಕೆಸಿಇಟಿ ಪರೀಕ್ಷೆಯ ಇಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ 57ನೇ ರ‌್ಯಾಂಕ್ ಹಾಗೂ ರಾಷ್ಟ್ರಮಟ್ಟದ ಜೆಇಇ ಮೈನ್ ಪರೀಕ್ಷೆಯಲ್ಲಿ 99.69 ಪರ್ಸೆಂಟೈಲ್ ಪಡೆದ ಸಂಸ್ಥೆಯ ಸಾಧಕ ವಿದ್ಯಾರ್ಥಿ ಅನಂತ್ ಎನ್.ಕೆ. ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕಿ ಜೋಸ್ನಾ ಸ್ನೇಹಲತಾ ಉಪಸ್ಥಿತರಿದ್ದರು. ಸಂಸ್ಥೆಯ ಉಪಪ್ರಾಂಶುಪಾಲ ಡಾ.ಪ್ರಕಾಶ್ ಭಟ್ ಸ್ವಾಗತಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಸೌಮ್ಯಾ ನಾಯ್ಕ ವಂದಿಸಿದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net