

ಮಸ್ಕಿ: ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ನೈತಿಕ ಶಿಕ್ಷಣ ಅಗತ್ಯವಾಗಿದೆ ಎಂದು ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಹೇಳಿದರು.
ಪಟ್ಟಣದ ಮಲ್ಲಿಕಾರ್ಜುನ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಭವಿಷ್ಯದಲ್ಲಿ ಶಿಕ್ಷಣದ ಸ್ಥಿತಿಗತಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು, ಪಾಲಕರು ಮತ್ತು ಮಕ್ಕಳು ಒಂದೇ ಸರಪಳಿಯಲ್ಲಿದ್ದಾಗ ಮಾತ್ರ ಉತ್ತಮ ಶಿಕ್ಷಣ ಸಿಗಲು ಸಾಧ್ಯ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಬೆಕು. ಕೋಳಿಯಂತೆ ಕಡಿಮೆ ನಿದ್ದೆ, ಬೆಕ್ಕಿನ ಜಾಣ್ಮೆ, ನಾಯಿಯಂತೆ ಓದಿನ ಬಗ್ಗೆ ನಿಯತ್ತು ಇಟ್ಟುಕೊಳ್ಳಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಪಾರ್ಶ್ವನಾಥ ಕೋಲಾರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಿವಕುಮಾರ, ಉಪಾಧ್ಯಕ್ಷ ಪ್ರಕಾಶ ಮಸ್ಕಿ, ಸಹಕಾರ್ಯದರ್ಶಿ ಮಂಜುನಾಥ ಬಿಜ್ಜಳ, ಖಜಾಂಚಿ ಭರತರಾಜ ದೇಶಮುಖ, ಪ್ರಾಚಾರ್ಯ ವೀರೇಶ ಹೂಗಾರ, ಮುಖ್ಯಶಿಕ್ಷಕ ಸಿದ್ದಾರಡ್ಡಿ ಗಿಣಿವಾರ, ಶಿವರಾಜ, ಕೃತಿಕಾ ಹಾಗೂ ಸಜ್ಜಲ ಶ್ರೀ ಇದ್ದರು.