ಮಕ್ಕಳಿಗೆ ಮೊಟ್ಟೆಯೇ ಬಲು ಇಷ್ಟ !

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು


ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮೊಟ್ಟೆ ಸೇವನೆ ಮಾಡುವ ಮಕ್ಕಳ ಸಂಖ್ಯೆ ಬರೋಬ್ಬರಿ ಶೇ.84ರಷ್ಟಿದೆ..!


ಪೂರಕ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮದಡಿ ಮೊಟ್ಟೆ ವಿತರಣೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದಕ್ಕೆ ಇದುವೇ ಸಾಕ್ಷಿ. ಶೇ.9.87ರಷ್ಟು ಮಕ್ಕಳು ಮಾತ್ರ ಬಾಳೆಹಣ್ಣು ಸ್ವೀಕರಿಸುತ್ತಿದ್ದಾರೆ. ಶೇಂಗಾ ಚಿಕ್ಕಿಯನ್ನು ಶೇ.6.11ರಷ್ಟು ಮಕ್ಕಳಷ್ಟೇ ಇಷ್ಟಪಡುತ್ತಿದ್ದಾರೆ. ಸರ್ಕಾರಿ, ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ವಾರದಲ್ಲಿ ಎರಡು ದಿನ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು, ಶೇಂಗಾ ಚಿಕ್ಕಿ ನೀಡಲಾಗುತ್ತಿದೆ.


ಮಕ್ಕಳಿಗೆ ನೆಚ್ಚಿನ ಆಹಾರ ಮೊಟ್ಟೆ :ಪ್ರೋಟಿನ್‌ಗಳ ನಿಧಿ ಎಂದು ಹೇಳುವ ಮೊಟ್ಟೆಯನ್ನು ಪ್ರಪಂಚದಾದ್ಯಂತ ಜನರು ತಿನ್ನಲು ಇಷ್ಟಪಡುತ್ತಾರೆ. ಅಂತೆಯೆ, ಜಿಲ್ಲೆಯ ಶಾಲಾ ಮಕ್ಕಳು ಸಹ ಮೊಟ್ಟೆಗೆ ಮನಸೋತಿದ್ದಾರೆ. ಜಿಲ್ಲೆಯಲ್ಲಿ 2068 ಸರ್ಕಾರಿ, 255 ಅನುದಾನಿತ ಸೇರಿದಂತೆ 2,323 ಶಾಲೆಗಳಿವೆ. ಈ ಶಾಲೆಗಳಲ್ಲಿ ಕ್ರಮವಾಗಿ 1,51,694 ಮತ್ತು 45,353 ಸೇರಿದಂತೆ 1,97,047 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಷ್ಟು ಮಕ್ಕಳಲ್ಲಿ ಬಹುತೇಕರಿಗೆ ಮೊಟ್ಟೆ ಇಷ್ಟದ ಆಹಾರ. 1,65,550 ಮಕ್ಕಳು ಮಧ್ಯಾಹ್ನ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆಯನ್ನು ಬಾಯಿಚಪ್ಪರಿಸಿ ತಿನ್ನುತ್ತಿದ್ದಾರೆ. ಇದರಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದ ಮಕ್ಕಳೇ ಹೆಚ್ಚು ಮೊಟ್ಟೆಯನ್ನು ಸ್ವೀಕರಿಸುತ್ತಿದ್ದಾರೆ.


ಪಿರಿಯಾಪಟ್ಟಣದಲ್ಲೇ ಹೆಚ್ಚು:

ಪಿರಿಯಾಪಟ್ಟಣ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಮೊಟ್ಟೆ ಸೇವನೆ ಮಾಡುತ್ತಿದ್ದು, ಇಲ್ಲಿ ಶೇ.94.36ರಷ್ಟು ಮಕ್ಕಳಿಗೆ ಇದು ಇಷ್ಟ. ನಂತರದ ಸ್ಥಾನದಲ್ಲಿ ಹುಣಸೂರು ತಾಲೂಕಿನಲ್ಲಿ ಶೇ.93.36ರಷ್ಟು ಮಕ್ಕಳಿಗೆ ಊಟದೊಂದಿಗೆ ಮೊಟ್ಟೆ ಬೇಕು. ಎಚ್.ಡಿ.ಕೋಟೆಯಲ್ಲಿ ಶೇ.88.02, ಕೆ.ಆರ್. ನಗರದಲ್ಲಿ ಶೇ.88.50, ನಂಜನಗೂಡಿನಲ್ಲಿ ಶೇ.83.49, ತಿ.ನರಸೀಪುರದಲ್ಲಿ ಶೇ.87.67ರಷ್ಟು ಚಿಣ್ಣರು ಮೊಟ್ಟಯನ್ನು ಭಕ್ಷಿಸುತ್ತಾರೆ. ಆದರೆ, ನಗರ ಪ್ರದೇಶ ವ್ಯಾಪ್ತಿಯಲ್ಲಿ ಇದರ ಪ್ರಮಾಣ ಕಡಿಮೆ ಇದೆ. ಮೈಸೂರು ದಕ್ಷಿಣ ವಲಯದಲ್ಲಿ ಶೇ.61.40, ಮೈಸೂರು ಉತ್ತರ ವಲಯದಲ್ಲಿ ಶೇ.77.94, ಮೈಸೂರು ಗ್ರಾಮಾಂತರ ವಲಯದಲ್ಲಿ ಶೇ.75.47ರಷ್ಟು ಮಕ್ಕಳು ತತ್ತಿಯನ್ನು ಸೇವನೆ ಮಾಡುತ್ತಿದ್ದಾರೆ.


ಶೇ.9ರಷ್ಟು ಮಕ್ಕಳಿಗೆ ಬಾಳೆಹಣ್ಣು ವಿತರಣೆ:

ಮೊಟ್ಟೆ ಸೇವಿಸದ ಮಕ್ಕಳ ಪ್ರಮಾಣ ಕಡಿಮೆ ಇದೆ. ಇವರಿಗೆ ಪರ್ಯಾಯವಾಗಿ ಬಾಳೆ ಹಣ್ಣು, ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. 19,457 ಮಕ್ಕಳು ಮಾತ್ರ ಬಾಳೆಹಣ್ಣು ಸ್ವೀಕರಿಸುತ್ತಾರೆ. ಇವರ ಪ್ರಮಾಣ ಶೇ.9.87ರಷ್ಟಿದೆ. ಇದರಲ್ಲಿ ನಗರ ವ್ಯಾಪ್ತಿಯಲ್ಲಿ ಬಾಳೆಹಣ್ಣು ಸೇವನೆ ಮಾಡುವ ಮಕ್ಕಳು ಹೆಚ್ಚಿದ್ದಾರೆ. ಅದರಲ್ಲೂ ಮೈಸೂರು ದಕ್ಷಿಣ ವಲಯದಲ್ಲಿ ಶೇ.23.27, ಮೈಸೂರು ಉತ್ತರ ವಲಯದಲ್ಲಿ ಶೇ.12.50, ಮೈಸೂರು ಗ್ರಾಮಾಂತರ ವಲಯದಲ್ಲಿ ಶೇ.14.75ರಷ್ಟು ಮಕ್ಕಳು ಇದನ್ನು ಸೇವನೆ ಮಾಡುತ್ತಿದ್ದಾರೆ. ಉಳಿದ ಗ್ರಾಮಾಂತರ ಭಾಗದಲ್ಲಿ ಈ ಮಕ್ಕಳ ಸಂಖ್ಯೆ ಶೇ.10ರ ಗಡಿಯನ್ನೂ ದಾಟಿಲ್ಲ.


ಶೇಂಗಾ ಚಿಕ್ಕಿ ಸ್ವೀಕಾರ ಬಲು ಕಡಿಮೆ:

ಶೇಂಗಾ ಚಿಕ್ಕಿಯನ್ನು ಶೇ.6.11ರಷ್ಟು ಮಕ್ಕಳು ಮಾತ್ರ ಸ್ವೀಕರಿಸುತ್ತಿದ್ದಾರೆ. ಇವರ ಸಂಖ್ಯೆ 12,040ರಷ್ಟಿದೆ. ಇದರಲ್ಲೂ ಮೈಸೂರು ದಕ್ಷಿಣ ವಲಯದಲ್ಲಿ ಶೇ.15ರಷ್ಟು ಮಕ್ಕಳು ಮಾತ್ರ ಚಿಕ್ಕಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಉಳಿದ ಕಡೆ ಈ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ. ಗ್ರಾಮಾಂತರ ಪ್ರದೇಶದಲ್ಲಿ ಇವರ ಪ್ರಮಾಣ ಬರೀ ಶೇ.2, 3ರಷ್ಟಿದೆ. ಪೂರಕ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ವಿದ್ಯಾರ್ಥಿಗೆ 6 ರೂ.ನಂತೆ ಖರ್ಚು ಮಾಡಲಾಗುತ್ತಿದೆ.


ಹೊಸದಾಗಿ 80 ಸಾವಿರ ಮಕ್ಕಳು ಸೇರ್ಪಡೆ:

ಮೊದಲು 1ರಿಂದ 8ನೇ ತರಗತಿ ಮಕ್ಕಳಿಗೆ ಮಾತ್ರ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಆಗಸ್ಟ್ ತಿಂಗಳಿಂದ ಇದನ್ನು 10ನೇ ತರಗತಿ ವರೆಗೆ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ಹೊಸದಾಗಿ 9ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಯ 32,305, ಅನುದಾನಿತ ಶಾಲೆಯ 17,745 ಸೇರಿದಂತೆ 80,702 ಮಕ್ಕಳು ಸೇರ್ಪಡೆಯಾಗಿದ್ದಾರೆ. ಇವರು ಸಹ ಪೂರಕ ಪೌಷ್ಟಿಕ ಆಹಾರದ ಲಾಭ ಪಡೆದುಕೊಳ್ಳುತ್ತಿದ್ದಾರೆ.


ಫಲಾನುಭವಿಗಳ ಪಟ್ಟಿ ತಯಾರು:

ಮೊಟ್ಟೆಯನ್ನು ತಿನ್ನುವ ವಿದ್ಯಾರ್ಥಿಗಳು ಮತ್ತು ಮೊಟ್ಟೆಯನ್ನು ತಿನ್ನದೇ ಬಾಳೆಹಣ್ಣನ್ನು ತಿನ್ನುವ ವಿದ್ಯಾರ್ಥಿಗಳು, ಬಾಳೆಹಣ್ಣು ತಿನ್ನದೇ ಇರುವವರಿಗೆ ಶೇಂಗಾ ಚಿಕ್ಕಿ ತಿನ್ನುವ ಫಲಾನುಭವಿಗಳು ಎಂಬುದಾಗಿ ಆಯಾ ವಿದ್ಯಾರ್ಥಿಗಳ ಮತ್ತು ಪಾಲಕರ ಒಪ್ಪಿಗೆ ಪಡೆದು ತರಗತಿವಾರು ಗುರುತಿಸಿ, ಪ್ರತ್ಯೇಕವಾದ ಫಲಾನುಭವಿಗಳ ಪಟ್ಟಿ ದಾಖಲೆಯನ್ನು ಸಿದ್ಧಪಡಿಸಲಾಗಿದೆ. ಆ ಪ್ರಕಾರ ನಿತ್ಯ ವಿತರಣೆಗೆ ಕ್ರಮ ವಹಿಸಲಾಗಿದೆ.

ಅಕ್ಷರ ದಾಸೋಹ ಕಾರ್ಯಕ್ರಮದಡಿ 4,955 ಅಡುಗೆಯವರು ಕೆಲಸ ಮಾಡುತ್ತಿದ್ದಾರೆ. ಪಿಎಬಿ ಅನುಮೋದಿಸಿರುವ ಅಡುಗೆ ಸಿಬ್ಬಂದಿ ಸಂಖ್ಯೆ 5119. ಇದರಲ್ಲಿ ಮುಖ್ಯ ಅಡುಗೆಯವರು 2169, ಸಹಾಯಕ ಅಡುಗೆಯವರು 2786 ಕೆಲಸ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿ ಮಕ್ಕಳಿಗೆ ಮಧ್ಯಾಹ್ನದ ಊಟ ತಯಾರಿಸಿ ಬಡಿಸುತ್ತಿದ್ದಾರೆ. ಇವರಲ್ಲಿ 164 ಸಿಬ್ಬಂದಿ ಕೊರತೆ ಇದೆ.

ಆರೋಗ್ಯ ವೃದ್ಧಿ

ಮೊಟ್ಟೆ ಸೇವನೆಯಿಂದ ಮಕ್ಕಳ ಆರೋಗ್ಯ, ಪೌಷ್ಟಿಕತೆ ಸಹ ವೃದ್ಧಿಯಾಗಿದೆ. ಶಾಲೆಯ ತರಗತಿವಾರು ಎಲ್ಲ ವಿದ್ಯಾರ್ಥಿಗಳ ದೇಹದ ತೂಕ ಮತ್ತು ಎತ್ತರವನ್ನು ಅಳತೆ ಮಾಡಿ ದಾಖಲೆಯನ್ನು ಒಂದು ವಹಿಯಲ್ಲಿ ನಿರ್ವಹಿಸಲಾಗುತ್ತಿದೆ. ಪ್ರತಿ ತಿಂಗಳ ಕೊನೆಯ ದಿನಾಂಕದಂದು ಒಂದು ಬಾರಿ ಪರಿಶೀಲಿಸಿ ರೀಡಿಂಗ್ ತೆಗೆದುಕೊಳ್ಳಲಾಗುತ್ತಿದೆ. ರೀಡಿಂಗ್ ಅನ್ನು ಹೋಲಿಕೆ ಮಾಡಿ ನೋಡಿ ಪ್ರಗತಿ ವಿಶ್ಲೇಷಣೆ ಮಾಡಿ ಪ್ರತಿ ವಿದ್ಯಾರ್ಥಿಯಲ್ಲಿ ಆಗಿರಬಹುದಾದ ಭೌತಿಕ ಬೆಳವಣಿಯ ಬದಲಾವಣೆ ಕುರಿತಂತೆ ಅಭಿಪ್ರಾಯ ದಾಖಲಿಸಲಾಗುತ್ತಿದೆ. ಇದರಲ್ಲಿ ಮಕ್ಕಳ ತೂಕ, ಎತ್ತರದಲ್ಲಿ ಸುಧಾರಣೆ ಕಂಡುಬಂದಿದೆ. ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದು ತಿಳಿದುಬಂದಿದೆ.


ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪೂರಕ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಬಹಳಷ್ಟು ಮಕ್ಕಳು ಮೊಟ್ಟೆ ಸೇವನೆಗೆ ಆಸಕ್ತಿ ತೋರುತ್ತಿದ್ದಾರೆ. ಆ ಪ್ರಕಾರ ಮೊಟ್ಟೆಯನ್ನು ಮಧ್ಯಾಹ್ನದ ಬಿಸಿಯೂಟದೊಂದಿಗೆ ನೀಡಲಾಗುತ್ತಿದೆ. ಮೊಟ್ಟೆ ಸೇವನೆ ಮಾಡದ ಮಕ್ಕಳಿಗೆ ಬಾಳೆಹಣ್ಣು, ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಇವರ ಪ್ರಮಾಣ ಕಡಿಮೆ ಇದೆ.
ಬಿ.ರೇವಣ್ಣ, ಶಿಕ್ಷಣಾಧಿಕಾರಿ,
ಶಾಲಾ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಕಾರ್ಯಕ್ರಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net