

ಮೈಸೂರು: ಆಧುನಿಕ ಯುಗದಲ್ಲಿ ಮಕ್ಕಳು ವಿಡಿಯೋ ಗೇಮ್, ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿದ್ದು, ತಮ್ಮ ಬಾಲ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ಮನೋವಿಕಾಸವೂ ಇಲ್ಲದೇ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಕರ್ನಾಟಕ ಜಾನಪದ ವಿಶ್ವದ್ಯಾಲಯದ ಪ್ರಾದೇಶಿಕ ಕೇಂದ್ರ ಸಂಯೋಜನಾಧಿಕಾರಿ ಕೆ.ಕೆ.ದೇವಾನಂದ ವರಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾಮಂಟಪದಿಂದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ‘ಎಳೆಯರ ಮೇಳ-2024’ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಮನೆಯಲ್ಲಿ ಕೂಡು ಕುಟುಂಬ ಇದ್ದಾಗ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ ಸೇರಿದಂತೆ ಮನೆಯಲ್ಲಿ ಇದ್ದವರು ನೀತಿಕಥೆಗಳನ್ನು ಹೇಳುತ್ತಿದ್ದರು. ಅಲ್ಲದೆ ಇತರ ಮಕ್ಕಳೊಂದಿಗೆ ಸೇರಿ ಆಟವಾಡಿ ಬೆಳೆಯುತ್ತಿದ್ದರು. ಇದರಿಂದ ಮಕ್ಕಳ ಮನಸ್ಸು ಉಲ್ಲಾಸಿತವಾಗಿ ಮನೋವಿಕಾಸ ಆಗುತ್ತಿತ್ತು ಎಂದರು.
ಆದರೆ ಆಧುನಿಕ ದಿನಗಳಲ್ಲಿ ಅಪ್ಪ-ಅಮ್ಮ ದುಡಿಯುತ್ತಿದ್ದರೆ ಮಕ್ಕಳು ಟಿವಿ, ಸಿನಿಮಾ, ವಿಡಿಯೋ ಗೇಮ್, ಸಾಮಾಜಿಕ ಜಾಲತಾಣ ಎನ್ನುವ ಜಾಲಕ್ಕೆ ಜೋತು ಬಿದ್ದಿದ್ದಾರೆ. ಇದರಿಂದ ಇತರ ಚಟುವಟಿಕೆಗಳು ಇಲ್ಲದೇ ಮನೋವಿಕಾಸವೂ ಇಲ್ಲದೆ ಸದಾ ಒತ್ತಡದಲ್ಲಿ ಸಿಲುಕಿಕೊಂಡಿರುತ್ತಾರೆ. ನಮ್ಮ ಜಾನಪದ, ಸಂಸ್ಕೃತಿ, ಪರಂಪರೆಯು ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಪ್ರಪಂಚದ ಅರಿವೇ ಇಲ್ಲದೆ ತಮ್ಮದೇ ಲೋಕದಲ್ಲಿ ಮುಳುಗಿರುವ ಮಕ್ಕಳು ಮುಂದೆ ಜೀವನ ಹೇಗೆ ನಿರ್ವಹಿಸುತ್ತಾರೆ? ಸಮಾಜವನ್ನು ಹೇಗೆ ಎದುರಿಸುತ್ತಾರೆ? ಎನ್ನುವ ಆತಂಕ ಪಾಲಕರಲ್ಲಿ ಮನೆ ಮಾಡುತ್ತಿದೆ. ಹಾಗಾಗಿ ಇಂತಹ ಶಿಬಿರಗಳು ಮಕ್ಕಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತವೆ. ಜತೆಗೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಕೆಲಸ ಮಾಡಿ ಮನೋವಿಕಾಸಕ್ಕೆ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಜನಪದ ಕಲಾವಿದ ಡಾ.ಮೈಸೂರು ಗುರುರಾಜ್ ಮಾತನಾಡಿ, ನಾನು ಅನಕ್ಷರಸ್ಥನಾಗಿದ್ದರೂ, ಹಿರಿಯರಿಂದ ಕಲಿತ ಜಾನಪದದಿಂದ ಜನರು ನನ್ನನ್ನು ಗುರುತಿಸುವಂತಾಗಿದೆ. ಮನೆಯಲ್ಲಿ ಹಿರಿಯರು ತಮಗೆ ಬಂದ ಕಲೆಯನ್ನು ಬಾಯಿಂದ ಬಾಯಿಗೆ ತಲುಪಿಸುತ್ತಿದ್ದರು. ಅವರು ಹೇಳಿಕೊಟ್ಟಿದ್ದನ್ನು ಆಸಕ್ತಿ, ಶ್ರದ್ಧೆಯಿಂದ ಕೇಳಿ ಮನನ ಮಾಡಿಕೊಂಡು ಹಾಡುತ್ತಿದ್ದೆವು ಎಂದು ತಾವು ಜಾನಪದ ಕಲಿತಿದ್ದನ್ನು ಮಕ್ಕಳಿಗೆ ತಿಳಿಸಿದರು.
ಈಗ ಟಿವಿ ಬಂದ ಮೇಲೆ ಮಕ್ಕಳಲ್ಲಿ ಚಟುವಟಿಕೆ ಇಲ್ಲವಾಗಿದೆ. ವೈದ್ಯರು ಮೊಬೈಲ್ ಕೊಡಬೇಡಿ ಎನ್ನುತ್ತಾರೆ. ಆದರೆ ಮೇಸ್ಟ್ರು ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ಕಲಿಯಿರಿ ಎನ್ನುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳು ಇದ್ದಾರೆ. ಹೀಗಾಗಿ ರಜೆಯಲ್ಲಿ ಮಕ್ಕಳು ಹಾಡಿ, ನಲಿದು ಕಲಿಯಲು ಇಂತಹ ಶಿಬಿರಗಳು ಹೆಚ್ಚು ಆಯೋಜಿಸಬೇಕು ಎಂದು ಆಶಿಸಿದರು.
ಶಿಬಿರ ಸಂಚಾಲಕರಾದ ಚಂದ್ರಶೇಖರ್ ಆಚಾರ್ಯ ಅವರು ಶಿಬಿರ ರೂಪುರೇಷೆ, ಉದ್ದೇಶ, ಯೋಜನೆಗಳ ಕುರಿತು ವಿವರಿಸಿದರು.