

ಶಿರಹಟ್ಟಿ: ಪಟ್ಟಣದಲ್ಲಿ 2018- 19ರಲ್ಲಿ ಕಾರ್ಯಾರಂಭ ಮಾಡಿದ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆ ಸಮಸ್ಯೆಗಳ ಗೂಡಾಗಿದ್ದು, ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ನಿತ್ಯವೂ ಅಡುಗೆ ತಯಾರಿಸಲಾಗುತ್ತಿದೆ.
ಸ್ವಂತ ಕಟ್ಟಡ, ಮುಖ್ಯೋಪಾಧ್ಯಾಯ ಸೇರಿ ಕಾಯಂ ಮೇಷ್ಟ್ರು, ಅಡುಗೆ ಕೋಣೆ, ಮೂಲಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಲ್ಪಸಂಖ್ಯಾತರ ಮಕ್ಕಳು ಇಂಗ್ಲಿಷ್ ಮಾಧ್ಯಮದ ಶಿಕ್ಷಣದಿಂದ ಹಿಂದುಳಿಯಬಾರದು ಎಂಬ ಕಾರಣಕ್ಕೆ 2018ರಲ್ಲಿ ರಾಜ್ಯದಲ್ಲಿ ಮೌಲಾನಾ ಆಜಾದ್ ಶಾಲೆಗಳನ್ನು ತೆರೆಯಲಾಯಿತು. ಆರಂಭದಲ್ಲಿ ಶಾಲೆಗೆ ಸ್ವಂತ ಕಟ್ಟಡವಿರಲಿಲ್ಲ. ಹೀಗಾಗಿ, ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆದು ಅಲ್ಲಿ ಕೆಲ ಕೋಣೆಗಳಲ್ಲಿ ತರಗತಿ ಆರಂಭಿಸಲಾಯಿತು. ಸದ್ಯ 6 ರಿಂದ 10 ನೇ ತರಗತಿ ವರೆಗಿನ ಒಟ್ಟು 250 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಈವರೆಗೆ ಪ್ರಭಾರ ಮುಖ್ಯೋಪಾಧ್ಯಾಯ ಸೇರಿದಂತೆ ಉಳಿದ 6 ಜನ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂಲ ಸೌಲಭ್ಯ ಕೊರತೆ: 6 ಮತ್ತು 7ನೇ ತರಗತಿ ಮಕ್ಕಳು ಡೆಸ್ಕ್ ಕೊರತೆಯಿಂದ ನೆಲದಲ್ಲಿ ಕುಳಿತು ಪಾಠ ಕಲಿಯಬೇಕಾಗಿದೆ. 8, 9, 10ನೇ ತರಗತಿ ಮಕ್ಕಳು ಸಮಸ್ಯೆಗಳ ನಡುವೆಯೇ ಶಿಕ್ಷಣ ಪಡೆಯುವಂತಾಗಿದೆ. ಇನ್ನು ಶಾಲೆ ಆರಂಭವಾಗಿ 4 ತಿಂಗಳಾದರೂ ಸಮವಸ್ತ್ರ, ಶೂ, ಸಾಕ್ಸ್ ಪೂರೈಕೆಯಾಗಿಲ್ಲ. ಕುಡಿಯುವ ಶುದ್ಧ ನೀರು, ಶೌಚಗೃಹ, ಕಂಪ್ಯೂಟರ್, ವಾಚನಾಲಯ ಯಾವುದು ಇಲ್ಲ. ಮುಖ್ಯವಾಗಿ ಬಿಸಿಯೂಟದ ಪ್ರತ್ಯೇಕ ಅಡುಗೆ ಕೊಣೆ ಇಲ್ಲದೆ, ಪ್ರಭಾರ ಮುಖ್ಯೋಪಾಧ್ಯಾಯರು ಕರ್ತವ್ಯ ನಿರ್ವಹಿಸುವ ಕೊಠಡಿಯ ಆರ್ಥಭಾಗದಲ್ಲಿ ಅಡುಗೆ ಸಿದ್ಧಪಡಿಸಲಾಗುತ್ತಿದೆ. ಇದ್ದಬಿದ್ದ ಜಾಗದಲ್ಲಿ ಖುರ್ಚಿ, ಟೇಬಲ್ ಮತ್ತು ಪುಸ್ತಕಗಳನ್ನು ಪೇಸರಿಸಲಾಗಿದೆ. ಆಟದ ಮೈದಾನ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿಂದ ಮಕ್ಕಳು ಆಟೋಟ ಸ್ಪರ್ಧೆಯಿಂದ ದೂರು ಉಳಿಯುವಂತಾಗಿದೆ.
ಅತಿಥಿ ಶಿಕ್ಷಕರ ಉತ್ತಮ ಬೋಧನೆ ಇದ್ದರೂ 5 ವರ್ಷಗಳಿಂದ ನೂರೆಂಟು ಸಮಸ್ಯೆಗಳ ಮಧ್ಯೆ ಮಕ್ಕಳು ಪರದಾಡುವಂತಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಧ್ಯೇಯದೊಂದಿಗೆ ಶಾಲೆ ಆರಂಭಕ್ಕೆ ಸರ್ಕಾರ ತೋರಿದ ಉತ್ಸಾಹ ಸ್ವಂತ ಶಾಲಾ ಕಟ್ಟಡದ ಜತೆಗೆ ಕಾಯಂ ಶಿಕ್ಷಕರು, ಮೂಲಸೌಲಭ್ಯ ಒದಗಿಸಲು ಮುಂದಾಗಬೇಕೆಂಬುದು ಪಾಲಕರ ಒತ್ತಾಯವಾಗಿದೆ.
20 ಗುಂಟೆ ಜಮೀನು ದಾನ: ಶಾಲೆಗೆ ಸ್ವಂತ ಕಟ್ಟಡ ಸವಾಲಾಗಿ, ಬೇರೆ ಕಡೆಗೆ ಎತ್ತಂಗಡಿ ಆಗುವ ಲಕ್ಷಣ ಕಂಡುಬಂದಾಗ ಸ್ಥಳೀಯ ಶಿಕ್ಷಣ ಪ್ರೇಮಿ ರಿಯಾಜ್ ಢಾಲಾಯತ್ ತಮ್ಮ ಜಮೀನಿನಲ್ಲಿ 20 ಗುಂಟೆ ಭೂಮಿ ದಾನ ನೀಡಿದರು. ಪರಿಣಾಮ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ತಾಲೂಕು ಶಿಕ್ಷಣಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದಂತೆ ಕೊನೆಗೆ 4 ಕೊಠಡಿಗಳ ನಿರ್ಮಾಣಕ್ಕೆ 50 ಲಕ್ಷ ರೂ.ಅನುದಾನ ದೊರೆತ್ತಿದ್ದರಿಂದ ಅಂದು ಶಾಸಕರಾಗಿದ್ದ ರಾಮಣ್ಣ ಲಮಾಣಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಸದರಿ ಲಭ್ಯವಾದ ಅನುದಾನಲ್ಲಿ 4 ಕೊಠಡಿಗಳು ನಿರ್ಮಾಣಗೊಂಡಿದ್ದು, ಮಕ್ಕಳ ಸಂಖ್ಯೆಗನುಗುಣವಾಗಿ ಇನ್ನೂ 5 ಕೊಠಡಿಗಳ ಅಗತ್ಯವಿದೆ. ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶಾಸಕರು ಕ್ರಮ ವಹಿಸಬೇಕಿದೆ.
ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತರಗತಿ ನಡೆಸಲಾಗುತ್ತಿದ್ದು, ನಿಯಮಾನುಸಾರ ಕೆಪಿಎಸ್‌ಸಿ ಯಿಂದ ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಹೀಗಾಗಿ ಅತಿಥಿ ಶಿಕ್ಷಕರ ಸೌಲಭ್ಯದೊಂದಿಗೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಅನುದಾನ ಕೊರತೆಯಿಂದ ಡೆಸ್ಕ್ ಇನ್ನಿತರ ಸೌಲಭ್ಯ ಕಲ್ಪಿಸಲು ಸಮಸ್ಯೆಯಾಗಿದೆ. ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.-ಅಮಿತ್ ಬಿದ್ರಿಜಿಲ್ಲಾ ಅಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ.