ಮೈಸೂರಿನಲ್ಲಿ ಶಾಲೆಯಿಂದ ಹೊರಗಿವೆ ಹಳ್ಳಿಹೈಕ್ಳು...!

full
Published on

ಮಂಜುನಾಥ ಟಿ. ಭೋವಿ ಮೈಸೂರು
ರಾಜ್ಯದಲ್ಲಿ 14 ವರ್ಷದ ಒಳಗಿನ 10.12 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬ ಕಳವಳಕಾರಿ ಅಂಶ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಯಲ್ಲೂ 229 ಮಕ್ಕಳು ಶಾಲೆಯಿಂದ ದೂರವುಳಿಸಿದ್ದಾರೆ. ಆದರೆ, ಇಂತಹ ಮಕ್ಕಳ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆ ಇರುವುದು ತುಸು ಸಮಾಧಾನ ತಂದಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದಕ್ಕೆ ಸಂಬಂಧಿಸಿದಂತೆ 2013ರಲ್ಲಿ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈ ಕುರಿತು ನಡೆಸಿರುವ ಸಮೀಕ್ಷೆಯ ವರದಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರ ಬುಧವಾರ ಸಲ್ಲಿಸಿದೆ. ಅದರಲ್ಲಿ 10.12 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಅಂಶ ದಾಖಲಾಗಿದೆ.

ಶಾಲೆ ಬರಲು ಮನಸ್ಸು ಮಾಡದ ಮಕ್ಕಳು: ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಯತ್ನದ ನಡುವೆಯೂ ಇನ್ನೂ 229 ಮಕ್ಕಳು ಶಾಲೆಗೆ ಮರಳಲು ಮನಸ್ಸು ಮಾಡುತ್ತಿಲ್ಲ. 142 ಬಾಲಕರು ಮತ್ತು 87 ಬಾಲಕಿಯರು ಶಾಲೆಗೆ ಬರಲು ಹಿಂದೇಟು ಹಾಕಿದ್ದಾರೆ. ಸುಶಿಕ್ಷಿತರ ನೆಲಬೀಡಾದ ಜಿಲ್ಲೆಯಲ್ಲಿ ಇಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಕರೊನಾ ಎಫೆಕ್ಟ್: ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲೇ ಬಹಳಷ್ಟು ಮಕ್ಕಳು ಶಾಲೆಯಿಂದ ದೂರು ಉಳಿದಿದ್ದಾರೆ. ಕೋವಿಡ್ ಕಾರಣಕ್ಕೆ ಶಾಲೆಗಳನ್ನು ಮುಚ್ಚಿದ್ದು, ಹಳ್ಳಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಕರೊನಾ ಕಾರಣಕ್ಕೆ 2020-2021ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ಆನ್‌ಲೈನ್ ಕ್ಲಾಸ್‌ಗಳು ಮಾತ್ರ ನಡೆದಿದ್ದವು. ಇದೆಲ್ಲ ಹಳ್ಳಿ ಮಕ್ಕಳಿಗೆ ಅಪಥ್ಯವಾಗಿತ್ತು. ವರ್ಷವಿಡೀ ಮನೆಯಲ್ಲೇ ಸಮಯ ಕಳೆದ ಮಕ್ಕಳು, ಪಾಲಕರೊಂದಿಗೆ ಕೃಷಿ ಇನ್ನಿತರ ಕೆಲಸಗಳಲ್ಲಿ ತೊಡಿಸಿಕೊಂಡಿದ್ದು, ಇದೀಗ ಇವರೆಲ್ಲ ಕಲಿಕೆಯತ್ತ ನಿರಾಸಕ್ತಿ ಬೆಳೆಸಿಕೊಂಡಿದ್ದಾರೆ.

ಕಾರಣಗಳು ಏನು?: ವಲಸೆ, ಮನೆ ಕೆಲಸದ ಕಾರಣಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಮಕ್ಕಳು ಶಾಲೆ ಬಿಟ್ಟಿದ್ದಾರೆ. ಜತೆಗೆ, ಬಡತನ, ಮದುವೆ, ಶಾಲೆಯಲ್ಲಿ ಉತ್ತಮ ವಾತಾವರಣವಿಲ್ಲದಿರುವುದು, ಶಿಕ್ಷಕರ ಭಯ, ಮನೆಯಿಂದ ಓಡಿ ಹೋಗುವುದು, ತೀವ್ರ ಅನಾರೋಗ್ಯವೂ ಶಾಲೆ ಬಿಡಲು ಕಾರಣವಾಗಿದೆ. ‘ಋತುಮತಿ’ ಆದಳು ಎನ್ನುವ ಕಾರಣಕ್ಕೆ ಶಾಲೆಗೆ ಹೋಗಲು ಬಾಲಕಿಯರನ್ನು ಪಾಲಕರು ನಿರ್ಬಂಧಿಸಿದ್ದಾರೆ. ಜ್ಞಾನಪೂರಿತ ಸಮಾಜದ ನಿರ್ಮಾಣಕ್ಕೆ ಶಾಲಾ ಶಿಕ್ಷಣ ಅತಿ ಮುಖ್ಯ. ಆದರೆ, ಈ ಹಕ್ಕನ್ನೇ ಮಕ್ಕಳಿಂದ ಕಿತ್ತುಕೊಂಡರೆ ಇಡೀ ಸಮಾಜ ವಿರೂಪವಾಗುವುದರಲ್ಲಿ ಅನುಮಾನ ಇಲ್ಲ. ಆದ್ದರಿಂದ ಈ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದು ಜರೂರಾಗಿದೆ.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. 751 ಮಕ್ಕಳ ಪೈಕಿ 522 ಮಕ್ಕಳನ್ನು ಶಾಲೆಗೆ ಕರೆತರಲಾಗಿದೆ. ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನಗಳೂ ನಡೆದಿವೆ.ರಾಮಚಂದ್ರರಾಜೇ ಅರಸ್, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net