

ವೀರಯ್ಯ ಎಂ. ವಸ್ತ್ರದ ಹೊಳೆಆಲೂರ
ಗ್ರಾಮೀಣ ಭಾಗದಲ್ಲಿ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಮಸ್ಯೆಯಾಗಿದ್ದು, ಪ್ರತಿಭೆಯ ಮೂಲಕ ದೊರೆತ ಸರ್ಕಾರಿ ‘ಆದರ್ಶ ಶಾಲೆ’ಯ ಸೀಟು ಬಿಟ್ಟುಕೊಡಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತಿದೆ.
ಅಲ್ಲಿ ಸುಸಜ್ಜಿತ ಶಾಲಾ ಕಟ್ಟಡವಿದೆ, ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕರಿದ್ದಾರೆ, ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆ ಇದೆ. ಆದರೆ, ಈ ಶಾಲೆಗಳಲ್ಲಿ ಕಲಿಯುವ ಆಸೆ ಹೊತ್ತು ಸರ್ಕಾರ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಪ್ರವೇಶ ಪಡೆದರೂ ಸಮರ್ಪಕ ಸಾರಿಗೆ ಸಂಪರ್ಕವಿಲ್ಲದೆ ಮಕ್ಕಳು ಶಾಲೆಗೆ ತಲುಪಲು ಪರದಾಡುವ ಸ್ಥಿತಿಯಿದೆ. ಹೋಬಳಿಯ ಮಕ್ಕಳು ನಿತ್ಯಯಾತನೆ ಅನುಭವಿಸಬೇಕಾಗಿದೆ.
ಹೋಬಳಿಯ ಗ್ರಾಮಗಳಿಂದ ರೋಣ ತಾಲೂಕಿನ ಇಟಗಿಯ ಆದರ್ಶ ಶಾಲೆ 40-45 ಕಿ.ಮೀ. ದೂರದಲ್ಲಿದೆ. ಮೆಣಸಗಿ ಗ್ರಾಮದಿಂದ ಹೊಳೆಆಲೂರ ಕುರಹಟ್ಟಿ ಮಾರ್ಗವಾಗಿ ನೇರವಾಗಿ ಇಟಗಿ ಗ್ರಾಮಕ್ಕೆ ಬಸ್ ಇಲ್ಲ. ಇಲ್ಲಿಗೆ ಬಸ್ ಬಿಡುವಂತೆ ಮಕ್ಕಳು, ಪಾಲಕರು ಹಲವು ವರ್ಷಗಳಿಂದ ಸಾರಿಗೆ ಅಧಿಕಾರಿಗಳಿಗೆ ಆಗ್ರಹಿಸುತ್ತಲೇ ಇದ್ದಾರೆ. ಯಾರೂ ಕ್ಯಾರೆ ಎನ್ನುತ್ತಿಲ್ಲ.
ರೋಣ ಮಾರ್ಗವಾಗಿ ಶಾಲೆಗೆ ಹೋಗಲು ಎರಡ್ಮೂರು ಬಸ್ ಬದಲಾಯಿಸಬೇಕಾಗಿದೆ. ಸರಿಯಾದ ಸಮಯಕ್ಕೆ ಶಾಲೆಗೆ ಮುಟ್ಟಬೇಕಾದರೆ ಬೆಳಗ್ಗೆ 7ಗಂಟೆಗೆ ಮನೆ ಬಿಡಬೇಕು. ಸಮಯದ ಅಭಾವದಿಂದ ಬಸ್‌ನಲ್ಲಿಯೇ ಉಪಾಹಾರ ಸೇವಿಸಬೇಕಿದೆ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯಿಂದ ಮಕ್ಕಳು ನಿಂತುಕೊಂಡೇ ಪ್ರಯಾಣಿಸಬೇಕಾಗಿದೆ. ಮಧ್ಯಾಹ್ನ 4.30ಕ್ಕೆ ಶಾಲೆ ಬಿಟ್ಟು ಪುನಃ ಮನೆ ತಲುಪಲು ಕತ್ತಲಾಗುತ್ತದೆ. ಮಳೆಗಾಲದಲ್ಲಿ ಮಕ್ಕಳ ದಾರಿ ಕಾಯುತ್ತಾ ಆತಂಕದಿಂದಲೇ ತಂದೆ-ತಾಯಿ ದಾರಿ ಕಾಯುವಂತಾಗಿದೆ.
ಭಾರವಾದ ಬ್ಯಾಗ್ ಹೊತ್ತು ಓಡಿ ಬಂದು ಬಸ್ ಹತ್ತುವಾಗ ಬಿದ್ದು ಗಾಯಗೊಂಡ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಕೆಲವು ಪಾಲಕರು ಇದರ ಗೊಡವೆಯೇ ಬೇಡವೆಂದು ಆದರ್ಶ ಶಾಲೆ ಬಿಡಿಸಿ ಸಮೀಪದ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ‘2023- 24ನೇ ಸಾಲಿನ ಪ್ರವೇಶ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿ ಇಟಗಿಯ ಆದರ್ಶ ಶಾಲೆಯ 6ನೇ ತರಗತಿಗೆ ನನ್ನ ಮಗಳು ಆಯ್ಕೆಯಾಗಿದ್ದಳು. ಬಸ್ ಹತ್ತುವಾಗಿ ಬಿದ್ದು ಗಾಯ ಮಾಡಿಕೊಂಡಿದ್ದಾಳೆ. ಹೀಗಾಗಿ ಅಲ್ಲಿಂದ ವರ್ಗಾವಣೆ ಮಾಡಿಸಿಕೊಂಡು ಸ್ಥಳೀಯ ಶಾಲೆಗೆ ಸೇರ್ಪಡೆ ಮಾಡಿದ್ದೇವೆ’ ಎನ್ನುತ್ತಾರೆ ನಾಗರಾಜ ಕಂಠಿ.
ಹೊಳೆಆಲೂರ- ರೋಣ. ಹಾಗೂ ರೋಣ- ಗಜೇಂದ್ರಗಡ ಮಾರ್ಗದಲ್ಲಿ ಬಸ್ ವ್ಯವಸ್ಥೆ ತಕ್ಕ ಮಟ್ಟಿಗೆ ಇದೆ. ಆದರೆ ಶಾಲಾ ಮಕ್ಕಳ ಸಲುವಾಗಿ ಮೆಣಸಗಿಯಿಂದ ಹೊಳೆಆಲೂರ ಮಾರ್ಗವಾಗಿ ಇಟಗಿ ಗ್ರಾಮಕ್ಕೆ ಬಸ್ ಬಿಡುವಂತೆ ಬಹಳ ದಿನಗಳಿಂದ ಜನರ ಬೇಡಿಕೆ ಇದೆ. ಸಿಬ್ಬಂದಿ, ಬಸ್‌ಗಳ ಕೊರತೆಯಿಂದ ಬೇಡಿಕೆ ಈಡೇರಿಸಲಾಗಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.-ಎಂ.ಎಂ. ಯಕ್ಸಂಬಿ, ರೋಣ ಡಿಪೋ ವ್ಯವಸ್ಥಾಪಕ ಆದರ್ಶ ಶಾಲೆ ಇರುವುದು ರೋಣ ತಾಲೂಕಿನಲ್ಲಿ. ನಾವು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವುದು ನರಗುಂದ ಮತಕ್ಷೇತ್ರಕ್ಕೆ. ಲೋಕಸಭೆಗೆ ಮತ ಹಾಕುವುದು ಬಾಗಲಕೋಟೆ ಕ್ಷೇತ್ರದಲ್ಲಿ. ಹೀಗಾಗಿ ಹೊಳೆಆಲೂರ ಹೋಬಳಿಯ ಜನರ ಗೋಳು ಜನಪ್ರತಿನಿಧಿಗಳಿಗೆ ಕೇಳುತ್ತಿಲ್ಲ. ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸದಿದ್ದರೆ ಹೋರಾಟಕ್ಕೆ ಅನಿವಾರ್ಯ-ವಾಸುದೇವ ಪವಾರ, ಕಸಾಪ ಹೋಬಳಿ ಘಟಕದ ಕಾರ್ಯದರ್ಶಿ