ಮಳೆಗೆ ಕುಸಿಯುತ್ತಿರುವ ಶಾಲೆ ಮೇಲ್ಛಾವಣಿ

MYK
Published on

ಮಾಯಕೊಂಡ: ಕಳೆದೊಂದು ತಿಂಗಳಿಂದ ನಿರಂತರವಾಗಿ ಸುರಿದ ಮಳೆಗೆ ಮಾಯಕೊಂಡ ಹೋಬಳಿ ಹೆದ್ನೆ ಗ್ರಾಮದ ಲಂಬಾಣಿ ಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಿಲ್ಡಿಂಗ್ ಮೇಲ್ಛಾವಣಿ (ಆರ್‌ಸಿಸಿ) ಸೋರುತಿದ್ದು, ಕುಸಿಯುವ ಅಂತ ತಲುಪಿದೆ.

ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಪಂ ವ್ಯಾಪ್ತಿಯ ಹೆದ್ನೇ ಗ್ರಾಮದ ಲಂಬಾಣಿ ಹಟ್ಟಿಯಲ್ಲಿ ಸುಮಾರು 150ಕ್ಕಿಂತ ಅಧಿಕ ಮನೆಗಳಿದ್ದು, ಶಾಲೆಯಲ್ಲಿ ಒಂದರಿಂದ 5ನೇ ತರಗತಿವರೆಗೆ 26 ಮಕ್ಕಳು ಕಲಿಯುತ್ತಿದ್ದು, ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಟಿಜಿಟಿ ಮಳೆಗೆ ಶಾಲಾ ಕಟ್ಟಡದ ಮೇಲ್ಭಾಗದ ಛಾವಣಿಯಲ್ಲಿ ನೀರು ಶೇಖರಣೆಗೊಂಡು ಕಟ್ಟಡದ ಗೋಡೆಗಳು ಸೇರಿದಂತೆ ಮೇಲ್ಚಾವಣಿ ತುಂಬೆಲ್ಲ ನೀರು ತುಂಬಿ ಗೋಡೆಗಳು ಬಿರುಕು ಬಿಟ್ಟಿವೆ.

ಹುಚ್ಚವ್ವನಹಳ್ಳಿ ಗ್ರಾಪಂ 2016-17ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯ 1.25 ಲಕ್ಷ ರೂ.ಗಳ ಅನುದಾನದಲ್ಲಿ ಶಾಲಾ ಮೇಲ್ಛಾವಣಿಗೆ ಸಿಮೆಂಟ್ ಕಾಂಕ್ರಿಟ್ ಹಾಕಿಸಲಾಗಿತ್ತು. ಹೀಗಿದ್ದರೂ ಕಳಪೆ ಕಾಮಗಾರಿಯಿಂದ ಮತ್ತೇ ಸೋರಲಾರಂಭಿಸಿದೆ. 2022ರಲ್ಲಿ ಮತ್ತೊಮ್ಮೆ ಸಿಮೆಂಟ್ ಕಾಂಕ್ರಿಟ್ ಹಾಕಿದ್ದರೂ ಸೋರುವುದು ನಿಂತಿಲ್ಲ.

ಜತೆಗೆ, ಬಿಸಿಯೂಟ ತಯಾರಿಸುವ ಅಡುಗೆ ಮನೆ ಕಟ್ಟಡವು ಸಂಪೂರ್ಣ ಹಾಳಾಗಿ ಗೋಡೆಗಳು ಬಿರುಕು ಬಿಟ್ಟಿವೆ. ಆದ್ದರಿಂದ ಸೋರುತ್ತಿರುವ ಶಾಲಾ ಕಟ್ಟಡ ಹಾಗೂ ಅಡುಗೆ ಮನೆ ತಕ್ಷಣ ದುರಸ್ತಿಪಡಿಸುವಂತೆ ಪಾಲಕರು ಒತ್ತಾಯಿಸಿದ್ದಾರೆ.

ಈ ಕುರಿತು ಶಾಲೆ ಶಿಕ್ಷಕ ವೀರಣ್ಣ ಮಾತನಾಡಿ, ಕಳೆದ ವಾರವಷ್ಟೇ ದಕ್ಷಿಣ ವಲಯ ಬಿಇಒ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೋರುವ ಕೊಠಡಿಯಲ್ಲಿ ಮಕ್ಕಳನ್ನು ಯಾವುದೇ ಕಾರಣಕ್ಕೂ ಕೂರಿಸಬೇಡಿ ಎಂದು ತಿಳಿಸಿದ್ದಾರೆ. ಆದ್ದರಿಂದ ಅಲ್ಲಿ ಮಕ್ಕಳನ್ನು ಕೂರಿಸುತ್ತಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net