

ಶ್ರೀನಿವಾಸಪುರ: ಬೇಸಿಗೆ ರಜೆ ಮುಗಿದು ಮೇ 28ರಿಂದಲೇ ಹೊಸ ಶೈಕ್ಷಣಿಕ ವರ್ಷಾರಂಭವಾಗಿದ್ದು, ಜಿಲ್ಲಾ ಶಿಕ್ಷಣ ಇಲಾಖೆ ಎಲ್ಲ ತಾಲೂಕುಗಳಿಗೂ ಮೊದಲ ಹಂತದ ಪಠ್ಯಪುಸ್ತಕಗಳನ್ನು ರವಾನೆ ಮಾಡಿದ್ದರೂ, 2ನೇ ಹಂತದಲ್ಲಿ ಲೋಪ ಎಸಗಿದೆ. ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಮೊದಲ ಸ್ಥಾನ ಪಡೆದ ಶ್ರೀನಿವಾಸಪುರ ಶೈಕ್ಷಣಿಕ ಕ್ಷೇತ್ರಕ್ಕೆ ಈಗಾಗಲೇ ಶೇ.75 ಪಠ್ಯಪುಸ್ತಕ ತಲುಪಿದ್ದು, ಇನ್ನುಳಿದ ಶೇ.25 ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ತಲುಪದಿರುವುದಿಂದ ಪಾಠ ಪ್ರವಚನಕ್ಕೆ ಕೊಕ್ಕೆ ಬಿದ್ದಿದೆ.
ತಾಲೂಕಿನಲ್ಲಿ ಒಟ್ಟು 280 ಸರ್ಕಾರಿ ಪ್ರಾಥಮಿಕ ಶಾಲೆಗಳು, 25 ಪ್ರೌಢಶಾಲೆಗಳಿದ್ದು, ಈಗಾಗಲೇ ಶಾಲೆ ಆರಂಭವಾಗಿ 18ದಿನ ಕಳೆದಿದ್ದು, ಈ ಬಾರಿ ಸಮಯಕ್ಕೆ ಸರಿಯಾಗಿ ಪಠ್ಯ ಪುಸ್ತಕಗಳು ಕೈ ಸೇರಿಲ್ಲ. ಇದರಲ್ಲಿ ತಾಲೂಕು ಶಿಕ್ಷಣ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಪ್ರಶ್ನೆ ಶಿಕ್ಷಣ ಪ್ರೇಮಿಗಳಲ್ಲಿ ಉದ್ಬವಾಗಿದೆ.
ತಾಲೂಕಿನಲ್ಲಿರುವ 280 ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ ಈಗಾಗಲೇ 40 ಶಾಲೆಗಳು 3-4 ವರ್ಷಗಳಿಂದಲೂ ಮುಚ್ಚಿವೆ. ಮತ್ತೊಂದು ಕಡೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ. ಸರ್ಕಾರಿ ಶಾಲೆ ಉಳಿಸುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಇಲಾಖೆ ರೂಪಿಸಿದ್ದು, ಸರ್ಕಾರ ಯೋಜನೆಗಳಿಗೆ ಅಧಿಕಾರಿಗಳು, ಶಿಕ್ಷಕರು ಕೈಜೋಡಿಸಿದಾಗ ಸರ್ಕಾರ ಚಿಂತನೆಗಳು ಸಾಕಾರವಾಗಲು ಸಾಧ್ಯ.
ಶಾಲೆಗಳು ಪ್ರಾರಂಭವಾಗುವ ಮುನ್ನ ಶಾಲೆ ಮುಖ್ಯಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಸಮನ್ವಯವಾಗಿ ಬೇಡಿಕೆಗಳ ಪಟ್ಟಿ ಮೇಲಾಧಿಕಾರಿಗಳಿಗೆ ಸಲ್ಲಿಸುವುದರಲ್ಲಿ ಮೀನ-ಮೇಷ ಮಾಡಿರುವುದರಿಂದ ಇಲ್ಲಿಯತನಕ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕಗಳ ಸರಬರಾಜು ಆಗಿಲ್ಲ ಎನ್ನಲಾಗಿದೆ. ಸಂಪನ್ಮೂಲ ವ್ಯಕ್ತಿಗಳು, ಮುಖ್ಯ ಶಿಕ್ಷಕರ ಸಮನ್ವಯ ಕೊರತೆ ಸರ್ಕಾರಕ್ಕೆ ಬೇಡಿಕೆಯ ಅಂಕಿ ಅಂಶಗಳ ಮಾಹಿತಿ ರವಾನೆಯಾಗಿಲ್ಲ. ಸದ್ಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶೇ.75 ಪಠ್ಯ ಪುಸ್ತಕಗಳು ರವಾನೆಯಾಗಿದ್ದು, ಪ್ರೌಢಶಾಲೆಗಳಿಗೆ 2ನೇ ಹಂತದ ಪುಸ್ತಕಗಳು ಸರಿಯಾಗಿ ರವಾನೆಯಾಗಿಲ್ಲ ಎಂದು ಪ್ರೌಢಶಾಲೆ ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಸರ್ಕಾರದಿಂದ ಪಠ್ಯ ಪುಸ್ತಕಗಳನ್ನು ಕ್ಲಸ್ಟರ್ ಮೂಲಕ ಆಯಾ ಶಾಲೆಗಳಿಗೆ ಸರಬರಾಜು ಮಾಡಲು ಒಂದಿಷ್ಟು ಮೊತ್ತ ಪ್ರತಿ ವರ್ಷ ಬಿಡುಗಡೆ ಆಗುತ್ತಲೇ ಇದೆ. ಈ ಹಣದಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಕೂಲಿ ಆಳುಗಳನ್ನು ಕರೆಯಿಸಿಕೊಂಡು ಯಾಕೆ ಮಾಡಿಸಬಾರದು. ಇದರ ಜವಾಬ್ದಾರಿ ಇರುವ ಬಿಇಒ ಅವರು ಯಾಕೆ ಇತ್ತ ಗಮನಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರು, ನಾಮಿನಿ ಸದಸ್ಯ ನರಸಿಂಹ ಮೂರ್ತಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ದೋರಣೆ ಖಂಡಿಸಿದ್ದಾರೆ.
ಜೋಡಣೆಗೆ ಮಕ್ಕಳ ಬಳಕೆ ಸಲ್ಲ
ಪಟ್ಟಣದ ತ್ಯಾಗರಾಜ್ ಬಡಾವಣೆಯಲ್ಲಿನ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ 8ನೇ ತರಗತಿಗೆ ಕೇವಲ ಒಂದು ವಿಷಯದ ಪಠ್ಯ ಪುಸ್ತಕ ವಿತರಣೆಯಾಗಿದೆ. ಉಳಿದ ವಿಷಯಗಳ ಪುಸ್ತಕಗಳು ಏಕೆ ಸರಬರಾಜು ಆಗಿಲ್ಲ. ಪುಸ್ತಕಗಳು ಕ್ರಮಬದ್ಧವಾಗಿ ನಿಗದಿತ ಸಮಯಕ್ಕೆ ಸರಬರಾಜು ಮಾಡಿಸಲು ಸಂಭಂಧಿಸಿದ ಸಂಪನ್ಮೂಲ ವ್ಯಕ್ತಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗೆ ಬದ್ಧತೆ ಇಲ್ಲವೇ. ಅಲ್ಲದೇ ಬಹುತೇಕ ಶಾಲೆಗಳಲ್ಲಿ ತರಗತಿ ನಡೆಯುವಾಗಲೇ ವಿದ್ಯಾರ್ಥಿಗಳನ್ನು ಪಠ್ಯ ಪುಸ್ತಕಗಳ ಜೋಡಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದೇಕೆ ಎಂದು ಪುರಸಭೆ ನಾಮಿನಿ ಸದಸ್ಯ ಬಿ.ನರಸಿಂಹಮೂರ್ತಿ ಪ್ರಶ್ನಿಸಿದರು.