

ಸಿಂಧನೂರು: ಶಾಲೆಗಳು ಆರಂಭವಾಗಿ ಎರಡೂವರೆ ತಿಂಗಳಾಗಿದೆ. ಆದರೆ, ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಶೂ, ಸಾಕ್ಸ್ ಇನ್ನೂ ವಿತರಿಸಿಲ್ಲ. ಶಿಕ್ಷಣ ಇಲಾಖೆ ವಿಳಂಬ ಧೋರಣೆಗೆ ಪಾಲಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಶೂ ಇಲ್ಲದೆ ಚಪ್ಪಲಿ, ಹಳೇ ಶೂ ಹಾಕಿಕೊಂಡು ಕೆಲ ಮಕ್ಕಳು ಬಂದ್ರೆ ಮತ್ತೆ ಕೆಲವರು ಬರಿಗಾಲಿನಲ್ಲಿ ಬರುತ್ತಿದ್ದಾರೆ. ಪಂಚ ಗ್ಯಾರಂಟಿ ನೀಡಿರುವ ಸರ್ಕಾರ ಶಾಲಾ ವಿದ್ಯಾರ್ಥಿಗಳನ್ನು ಮಾತ್ರ ನಿರ್ಲಕ್ಷಿಸಿದೆ. ಶೈಕ್ಷಣಿಕ ವರ್ಷ ಆರಂಭಗೊಂಡು ಎರಡೂವರೆ ತಿಂಗಳು ಕಳೆದರೂ ಶಾಲಾ ಮಕ್ಕಳಿಗೆ ನೀಡಬೇಕಾದ ಸೌಲಭ್ಯ ಒದಗಿಸದೇ ಕಡೆಗಿಸಲಾಗಿದೆ.
ಈ ವಿಚಾರವಾಗಿ ಪಾಲಕರು ಆಕ್ರೋಶಗೊಂಡಿದ್ದಾರೆ. ಶಿಕ್ಷಣ ಇಲಾಖೆ ಹೇಳೋದು ಒಂದು ಮಾಡೋದು ಮತ್ತೊಂದು ಎನ್ನುವಂತಾಗಿದೆ. ಶಾಲೆ ಆರಂಭದಲ್ಲಿ ಪಠ್ಯಪುಸ್ತಕ ಕೊಡುತ್ತೇವೆ ಅಂತ ಹೇಳಲಾಗಿತ್ತು. ಆದರೆ, ಅದೇ ಹಾಡು ಅದೇ ಕಥೆ ಶುರುವಾಗಿದೆ.
ಹಣ ಬಂದ ಮೇಲೆ ಶೂ, ಸಾಕ್ಸ್ ಖರೀದಿ: ಶೂ ಹಾಗೂ ಸಾಕ್ಸ್ ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿ ಆಯಾ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ವಹಿಸಲಾಗಿದೆ. ಕಳೆದ ವರ್ಷ ಶೂ ಹಾಗೂ ಸಾಕ್ಸ್ ಖರೀದಿಗೆ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂ. ಹಾಗೂ 9ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ನಿಗದಿ ಮಾಡಿತ್ತು. ಆದರೆ, ಈ ವರ್ಷ ಇದರ ಹಣ ಸಮರ್ಪಕವಾಗಿ ಶಾಲೆಗೆ ನೀಡಿಲ್ಲ.
ಹೀಗಾಗಿ ಶೂ, ಸಾಕ್ಸ್ ಖರೀದಿಗೆ ಒಂದು ಮತ್ತು ಎರಡನೇ ಹಂತದ ಹಣ ಬಂದಿದೆ. ಇನ್ನೂ ಹಣ ಬಿಡುಗಡೆಯಾಗಬೇಕಿದೆ. ಹಣ ಬಂದ ಮೇಲೆ ಖರೀದಿ ಮಾಡುತ್ತೇವೆ ಎಂದು ಹೇಳುತ್ತಿದ್ದು, ಬಹುತೇಕ ಶಾಲೆಗಳ ಮುಖ್ಯಶಿಕ್ಷಕರ ಖಾತೆಗೆ ಇನ್ನೂ ಹಣ ಬಂದಿಲ್ಲ ಎನ್ನುವ ಮಾಹಿತಿ ಇದೆ.
ಎಷ್ಟು ವಿದ್ಯಾರ್ಥಿಗಳಿಗೆ ಬೇಕಿದೆ? ಸಿಂಧನೂರು ಹಾಗೂ ಮಸ್ಕಿ ತಾಲೂಕು ವ್ಯಾಪ್ತಿಯ ಅಲಬನೂರು, ಬಾದರ್ಲಿ, ಬಳಗಾನೂರು, ಬಪ್ಪೂರ, ದೇವಿಕ್ಯಾಂಪ್, ಗೊರೇಬಾಳ, ಗೌಡನಬಾವಿ, ಗುಡದೂರು, ಗುಂಡ, ಹೊಸಳ್ಳಿ, ಜಾಲಿಹಾಳ, ಜವಳಗೇರಾ, ಕಲ್ಮಂಗಿ, ಕೆ.ನಗರ, ಕೆ.ಎಚ್.ಕಾಲನಿ, ಕೋಳಬಾಳ, 7ನೇ ಮೈಲ್‌ಕ್ಯಾಂಪ್, ಪಗಡದಿನ್ನಿ, ರಾಗಲಪರ್ವಿ, ರಾಮತ್ನಾಳ, ಆರ್.ಎಚ್.ನಂ.1, ರೌಡಕುಂದ, ಎಸ್.ವಿ.ಕ್ಯಾಂಪ್, ಸಿಂಧನೂರು, ತಿಡಿಗೋಳ, ತುರ್ವಿಹಾಳ ಸಿಆರ್‌ಪಿಗಳ 3ನೇ ತರಗತಿಯಿಂದ 10ನೇ ತರಗತಿವರೆಗೆ ಒಟ್ಟು 76989 ಮಕ್ಕಳಿಗೆ ಶೂ, ಸಾಕ್ಸ್ ವಿತರಿಸಬೇಕಿದೆ. ಈ ಬಾರಿ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಪಠ್ಯಪುಸ್ತಕ ಹಾಗೂ ಶೂ ಸಾಕ್ಸ್ ನೀಡುತ್ತೇವೆ ಎಂದು ಹೇಳಿದ್ದ ಶಿಕ್ಷಣ ಇಲಾಖೆ ಮಾತು ತಪ್ಪಿದೆ. ಪ್ರತಿ ಬಾರಿಯಂತೆ ಶೂ-ಸಾಕ್ಸ್ ವಿತರಣೆ ತಡಗೊಳಿಸಿದೆ. ಇನ್ನಾದರೂ ಗಮನಹರಿಸಿ, ಹಣ ಬಿಡುಗಡೆಗೆ ಮುಂದಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಬಿಇಒ, ಸಿಂಧನೂರು
ಬಸಲಿಂಗಪ್ಪ ಹುಡೇದ್
ಸಿಂಧನೂರು ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಶೂ, ಸಾಕ್ಸ್ ಖರೀದಿಗೆ ಸರ್ಕಾರದಿಂದ ನೇರವಾಗಿ ಆಯಾ ಶಾಲೆಗಳ ಮುಖ್ಯಶಿಕ್ಷಕರ ಖಾತೆಗೆ ಹಣ ಹಾಕಲಾಗಿದೆ. ಹಂತ ಹಂತವಾಗಿ ಎಲ್ಲ ಶಾಲೆಗಳ ಮುಖ್ಯಶಿಕ್ಷಕರ ಖಾತೆಗೆ ಹಣ ಜಮಾ ಆಗಲಿದೆ. ಎರಡ್ಮೂರು ದಿನಗಳಲ್ಲಿ ಶೂ, ಸಾಕ್ಸ್ ಖರೀದಿಸಿ ಮಕ್ಕಳಿಗೆ ವಿತರಿಸಲಾಗುತ್ತದೆ.