ಶಿಕ್ಷಕರು ಜ್ಞಾನ ದೇಗುಲದ ಬುನಾದಿ

dj mlk guruvandhane
Published on

ಮೊಳಕಾಲ್ಮೂರು: ಸಮಾಜ ಸುಧಾರಣೆಯಲ್ಲಿ ಅತ್ಯಂತ ಮಹತ್ವ ಪಡೆದಿರುವ ಶಿಕ್ಷಣ ಕ್ಷೇತ್ರದ ಬುನಾದಿ ಶಿಕ್ಷಕರು ಎಂದು ನಿವೃತ್ತ ಶಿಕ್ಷಕ ಬಿ.ಎಸ್.ಬಸವಕುಮಾರ್ ಅಭಿಪ್ರಾಯಪಟ್ಟರು.

ನಿವೃತ್ತ ಶಿಕ್ಷಕರ ಸ್ನೆಹ ಸಂಗಮ ಬಳಗ ಪಟ್ಟಣದ ಸ್ಕೈಪಂಕ್ಷನ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆ ದೇಗುಲವಿದ್ದಂತೆ, ಜೇನುಗೂಡಿನಂತ ಮಕ್ಕಳೇ ದೈವಸ್ವರೂಪಿಗಳು. ಅವರಿಗೆ ಗುಣಮಟ್ಟದ ಶಿಕ್ಷಣ ಕೊಡುವ ಜತೆಗೆ ಅವರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬಿತ್ತುವ ಮೂಲಕ ಉತ್ತಮ ನಾಗರಿಕನನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ದೊಡ್ಡದು ಎಂದರು.

ಉತ್ತಮ ಬೋಧನೆ, ಪ್ರೀತಿ, ಭವಿಷ್ಯ ರೂಪಿಸಿದ ಶಿಕ್ಷಕರನ್ನು ಜನರು, ವಿದ್ಯಾರ್ಥಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರು ಗುಣಮಟ್ಟದ ಬೋಧನೆ ಕಡೆ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.

ಜಗತ್ತನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಏಕೈಕ ಪ್ರಮುಖ ವ್ಯಕ್ತಿ ಗುರು. ಇಂತಹ ಪವಿತ್ರ ಸೇವೆಗೆ ಕಳಂಕ ತರದೆ ಮಾನವೀಯ ಗುಣ, ನಿಸ್ವಾರ್ಥ ಸೇವೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಮುಖಂಡ ಬಿ.ಪಾಂಡುರಂಗಪ್ಪ ಮಾತನಾಡಿ, ನಮ್ಮ ಪೂರ್ವದಲ್ಲಿ ಜನರು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುತ್ತಿರಲಿಲ್ಲ. ಆದರೆ, ಶಿಕ್ಷಕರಿಗೆ ಅತ್ಯಂತ ಹೆಚ್ಚು ಗೌರವ ನೀಡುತ್ತಿದ್ದರು.

ಈಗಲೂ ಹಳ್ಳಿಗಳಲ್ಲಿ ಅಂತಹ ಪದ್ಧತಿ ಇದೆ. ಅದನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಹೊಣೆಗಾರಿಕೆ ಶಿಕ್ಷಕರದ್ದೇ ಆಗಿದೆ ಎಂದು ಹೇಳಿದರು.

ಹಳೆಯ ವಿದ್ಯಾರ್ಥಿಗಳಾದ ವಿ.ಎನ್.ರಾಮರಡ್ಡಿ, ಎಂ.ಮಲ್ಲಿಕಾರ್ಜುನ, ಎನ್.ವೈ.ಪುಷ್ಪಲತಾ, ಜ್ಯೋತಿಲಕ್ಷ್ಮೀ, ಪರುಶುರಾಮಪ್ಪ, ಜಿ.ಕೆ.ಸುಳಿಗನ್ನಿ, ಇಂದಿರಾ, ಆರ್.ನಾಗರಾಜ್, ಶಾಂತಣ್ಣ, ಭಗವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net