

ಕಲಘಟಗಿ: ಕಳೆದ ನಾಲ್ಕಾರು ತಿಂಗಳುಗಳಿಂದ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪೋಷಕರು ಹಾಗೂ ಶಾಲಾ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದಲ್ಲಿರುವ ಶಾಸಕರ ಮಾದರಿ ಶಾಲೆ, ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 1 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಕಳೆದ ನಾಲ್ಕೈದು ತಿಂಗಳುಗಳಿಂದ ಶಾಲಾ ಮಕ್ಕಳಿಗೆ ಕುಡಿಯಲು ಸಮರ್ಪಕ ನೀರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಗಳಲ್ಲಿ ಪಟ್ಟಣ ಪಂಚಾಯಿತಿ ಸರಬರಾಜಾಗುವ ನಳದಲ್ಲಿನ ನೀರು ಸಂಗ್ರಹಿಸಿ ಈಡಲಾಗುತ್ತದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಒಂದೆರೆಡು ದಿನಗಳಲ್ಲಿ ನೀರು ಖಾಲಿಯಾಗಿ ಊಟ ಮಾಡಿದ ನಂತರ ಮಕ್ಕಳಿಗೆ ಕುಡಿಯಲು ನೀರಿಲ್ಲದೆ ಮನೆಯಿಂದಲೇ ನೀರು ತರುವಂಥ ಸ್ಥಿತಿ ಬಂದೊದಗಿದೆ. ಒಂದೊಂದು ದಿನ ಪ.ಪಂ. ನಳಗಳ ಪೈಪ್‌ಲೈನ್‌ಗಳಲ್ಲಿ ಸಮಸ್ಯೆ ಉಂಟಾಗಿ ನೀರು ಬರದೆ ಶೌಚಗೃಹಕ್ಕೂ ನೀರಿಲ್ಲದೆ ಮಕ್ಕಳು ಪರದಾಡುವಂತಾಗಿದೆ.
ಶಾಸಕರ ಮಾದರಿ ಶಾಲಾ ಆವರಣದಲ್ಲಿ ಕೊಳವೆ ಬಾವಿ ಕೊರೆಸಿ ಆರು ತಿಂಗಳಾದರೂ ಅದಕ್ಕೆ ವಿದ್ಯುತ್ ಹಾಗೂ ಪೈಪ್‌ಲೈನ್ ಮಾಡಿಸಿಲ್ಲ ಎಂದು ಪೋಷಕರು ಹಾಗೂ ಶಾಲಾ ಮಕ್ಕಳು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಾಗಿದೆ.
ಪಟ್ಟಣ ಪಂಚಾಯಿತಿಯಿಂದ ಸರಬರಾಜಾಗುತ್ತಿರುವ ನಳಗಳಲ್ಲಿನ ನೀರು ದಿನಂಪ್ರತಿ ಬರುತ್ತದೆ. ಕೆಲವೊಂದು ಸಮಯದಲ್ಲಿ ಅಲ್ಲಲ್ಲಿ ಪೈಪ್‌ಗಳು ಕಟ್ ಆದ ಸಂದರ್ಭದಲ್ಲಿ ಮಕ್ಕಳಿಗೆ ತೊಂದರೆ ಉಂಟಾಗುತ್ತದೆ. ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ನೀರಿನ ಸಮಸ್ಯೆ ಮೇಲಿಂದ ಮೇಲೆ ಉಲ್ಬಣಗೊಳ್ಳುತ್ತಿದೆ. ಆದ್ದರಿಂದ ಶಾಲಾ ಆವರಣದಲ್ಲಿರುವ ಕೊಳವೆ ಬಾವಿಗೆ ತ್ವರಿತವಾಗಿ ಕನೆಕ್ಷನ್ ಕೊಟ್ಟು ಮಕ್ಕಳಿಗೆ ನೀರಿನ ಅನುಕೂಲ ಮಾಡಿಕೊಡಬೇಕೆಂದು ಶಾಸಕರ ಮಾದರಿ ಶಾಲಾ ಮುಖ್ಯ ಶಿಕ್ಷಕಿ ಆರ್.ಕೆ. ಕಾಂಬಳೆ, ಪೋಷಕ ಸುನೀಲ ಕಮ್ಮಾರ ಆಗ್ರಹಿಸಿದ್ದಾರೆ.
ಪ್ರತಿದಿನ ಪಟ್ಟಣ ಪಂಚಾಯಿತಿಯ ನಳಗಳ ಮುಖಾಂತರ ನೀರು ಬಿಡಲಾಗುತ್ತೆ. ಕೆಲವೊಂದು ಸಲ ವಿದ್ಯುತ್ ವ್ಯತ್ಯಯ ಉಂಟಾದರೆ ಸಮಸ್ಯೆ ಉಂಟಾಗುತ್ತದೆ. ಶಾಲಾ ಆವರಣದಲ್ಲಿ ಕೊರೆಸಲಾದ ಕೊಳವೆ ಬಾವಿಗೆ ವಿದ್ಯುತ್ ಹಾಗೂ ಪೈಪ್‌ಲೈನ್ ಕನೆಕ್ಷನ್ ಮಾಡಿಕೊಡುತ್ತೇವೆ.I ಐ.ಕೆ. ಗುಡದಾರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ