

ಹನೂರು: ಪಟ್ಟಣದಿಂದ ಅಜ್ಜೀಪುರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿನ ಅರಕನಹಳ್ಳದಲ್ಲಿ ಬುಧವಾರ ಎರಡು ಕಾಡಾನೆಗಳು ನೀರು ಕುಡಿಯುತ್ತಿದ್ದ ದೃಶ್ಯವನ್ನು ಕಂಡು ಶಾಲಾ ಮಕ್ಕಳು ಖುಷಿಪಟ್ಟರು.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ರಸ್ತೆಬದಿಯಲ್ಲಿನ ಅರಕನಹಳ್ಳದ ಗುಂಡಿಗಳಲ್ಲಿ ನೀರು ಸಂಗ್ರಹವಾಗಿದ್ದು, ಕಾಡಾನೆಗಳು ಆಗಾಗ್ಗೆ ನೀರು ಕುಡಿಯಲು ಆಗಮಿಸುತ್ತವೆ. ಇಲ್ಲಿ ಕಾಡಾನೆಗಳು ಸಾರ್ವಜನಿಕರಿಗೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಸಂಜೆ 4.30ರ ವೇಳೆಯಲ್ಲಿ 2 ಕಾಡಾನೆಗಳು ಹಳ್ಳದ ಗುಂಡಿಯಲ್ಲಿ ನೀರನ್ನು ಕುಡಿಯುತ್ತಿದ್ದವು. ಇದೇ ವೇಳೆಗೆ ಪಟ್ಟಣದಿಂದ ಅಜ್ಜೀಪುರದ ಕಡೆಗೆ ವ್ಯಾನ್‌ನಲ್ಲಿ ತೆರಳುತ್ತಿದ್ದ ಪಟ್ಟಣದ ಏಂಜೆಲ್ಸ್ ಶಾಲೆಯ ಮಕ್ಕಳು ಈ ದೃಶ್ಯವನ್ನು ಪ್ರತ್ಯಕ್ಷವಾಗಿ ಕಂಡು ಪುಳಕಿತರಾಗಿ ಕೆಲಕಾಲ ಕುತೂಹಲದಿಂದ ವೀಕ್ಷಿಸಿ ಖುಷಿ ಪಟ್ಟರು. ಹಾಗೆಯೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ವೀಕ್ಷಿಸಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದರು.
ಫಸಲು ನಾಶ: ಒಂದೆಡೆ ಕಾಡಾನೆಗಳು ನೀರು ಕುಡಿಯುತ್ತಿರುವ ದೃಶ್ಯವನ್ನು ಕಂಡು ಶಾಲಾ ಮಕ್ಕಳಲ್ಲಿ ಖುಷಿ ವ್ಯಕ್ತವಾಗಿದ್ದರೆ, ಇತ್ತ ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಆಣೆಹೊಲ ಗ್ರಾಮದ ಮಾದಯ್ಯ ಅವರ ಜಮೀನಿಗೆ ಮಂಗಳವಾರ ತಡರಾತ್ರಿ ಕಾಡಾನೆಯೊಂದು ಲಗ್ಗೆ ಇಟ್ಟು ಬಾಳೆ, ಹಲಸು ಹಾಗೂ ಮಾವಿನ ಫಸಲನ್ನು ತಿಂದು ನಾಶಪಡಿಸಿದೆ. ಆಗಾಗ್ಗೆ ಲಗ್ಗೆ ಇಡುತ್ತಿರುವ ಕಾಡಾನೆಯ ಕಡಿವಾಣಕ್ಕೆ ರೈತ ಮಾದಯ್ಯ ಒತ್ತಾಯಿಸಿದ್ದಾರೆ.