

ಕಂಪ್ಲಿ: ಗ್ರಾಮದಲ್ಲಿ ಸಾಮಾಜಿಕ ತಾರತಮ್ಯ ತೋರಿದಲ್ಲಿ ಹಾಗೂ ಅಸ್ಪಶ್ಯತೆ ಆಚರಣೆ ಕಂಡುಬಂದಲ್ಲಿ ಪೊಲೀಸರ ಗಮನಕ್ಕೆ ತರಬೇಕೆಂದು ಪಿಐ ಪ್ರಕಾಶ ಮಾಳಿ ಹೇಳಿದರು.
ತಾಲೂಕಿನ ರಾಮಸಾಗರದ ಅಂಬೇಡ್ಕರ್ ಕಾಲನಿಯಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ಭಾನುವಾರ ಮಾತನಾಡಿದರು. ಮಕ್ಕಳಿಗೆ ಲಿಂಗತಾರತಮ್ಯ ಮಾಡದೆ ಸಮಾನ ಶಿಕ್ಷಣ ನೀಡುವಲ್ಲಿ ಮತ್ತು ವಿದ್ಯಾರ್ಥಿ ವೇತನವನ್ನು ಮಕ್ಕಳಿಗೆ ಕೊಡಿಸುವಲ್ಲಿ ಪಾಲಕರು ನಿಗಾವಹಿಸಬೇಕು. ಅಂಬೇಡ್ಕರ್ ಚಿಂತನೆಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪಿಎಸ್‌ಐ ಬಿ.ಎಸ್.ನಾಯ್ಡು, ಪ್ರಮುಖರಾದ ಆರ್.ಎಂ.ರಾಮಯ್ಯ, ಬಿ.ನಾರಾಯಣಪ್ಪ, ಎಚ್.ಜಗದೀಶಗೌಡ, ಬಾಣದ ಮಲ್ಲಯ್ಯ, ಮಂಜುನಾಥ, ಅಗಸರ ಕೃಷ್ಟಪ್ಪ, ಕೆ.ಶಿವಕುಮಾರ್ ಇತರರಿದ್ದರು. ಶಾಂತಿ ಸಭೆ: ಗ್ರಾಮದಲ್ಲಿ ಏ.23 ಮತ್ತು 24ರಂದು ಗ್ರಾಮದೇವತೆ ದ್ಯಾವಮ್ಮದೇವಿ, ಉಡುಸಲಮ್ಮ ದೇವರ ಕುಂಭೋತ್ಸವ ನಡೆಯುವ ನಿಮಿತ್ತ ನಗರೇಶ್ವರ ದೇವಸ್ಥಾನ ಆವರಣದಲ್ಲಿ ಶಾಂತಿ ಸಭೆ ನಡೆಯಿತು.
ಪಿಐ ಪ್ರಕಾಶ್ ಮಾಳಿ ಮಾತನಾಡಿ, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕುಂಭೋತ್ಸವ ಆಚರಿಸಬೇಕು. ಯಾವುದೇ ಕಾರಣಕ್ಕೂ ಪ್ರಾಣಿ ಬಲಿ ನೀಡಬಾರದು. ಸರ್ವರೂ ಶಾಂತಿಯುತವಾಗಿ ಪರಸ್ಪರ ಸಾಮರಸ್ಯದಿಂದ ಹಬ್ಬ ಆಚರಿಸಬೇಕು.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಅಗತ್ಯ ಸಂಖ್ಯೆಯ ಪೊಲೀಸರನ್ನು ಬಂದೋಬಸ್ತಿಗಾಗಿ ನಿಯೋಜಿಸಲಾಗುವುದು. ಗ್ರಾಮದ ಹೊರಗಡೆ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಗ್ರಾಪಂ.ಮಾಜಿ ಅಧ್ಯಕ್ಷ ಬಿ.ನಾರಾಯಣಪ್ಪ ಮಾತನಾಡಿ, ಜಿಲ್ಲಾ ಮುಖ್ಯ ರಸ್ತೆ ಸಾಗಿರುವುದರಿಂದ ಬಿಗಿ ಬಂದೋಬಸ್ತು ಒದಗಿಸಬೇಕು ಎಂದು ಕೋರಿದರು.
ಪ್ರಮುಖರಾದ ಎಚ್.ಶಿವಶಂಕರಗೌಡ್ರು, ಕರೆಂಟ್ ಗೋಪಾಲಪ್ಪ, ಹುಲಿಕುಂಟೆಪ್ಪ, ಬಾಗಲಿ ಶರಣ, ರಾಗಿ ಪಂಪಯ್ಯಸ್ವಾಮಿ ಇತರರಿದ್ದರು.