ಮಕ್ಕಳಿಗೆ ಒತ್ತಡದ ಶಿಕ್ಷಣ ಬೇಡ

ನಾಗಮಂಗಲ ಪಟ್ಟಣದ ಎಂಆರ್‌ಪಿ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಎನ್.ಚಲುವರಾಯಸ್ವಾಮಿ ಸನ್ಮಾನಿಸಿದರು. ಕೆ.ನಾಗೇಶ್, ಜೆ.ವೈ.ಮಂಜುನಾಥ್ ಇದ್ದರು.
ನಾಗಮಂಗಲ ಪಟ್ಟಣದ ಎಂಆರ್‌ಪಿ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಎನ್.ಚಲುವರಾಯಸ್ವಾಮಿ ಸನ್ಮಾನಿಸಿದರು. ಕೆ.ನಾಗೇಶ್, ಜೆ.ವೈ.ಮಂಜುನಾಥ್ ಇದ್ದರು.
Published on

ನಾಗಮಂಗಲ: ಶಿಕ್ಷಣದ ವಿಚಾರದಲ್ಲಿ ಮಕ್ಕಳು ಅವರಿಷ್ಟಪಡುವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕೇ ವಿನಾ ಒತ್ತಡ ಪೂರ್ವಕವಾಗಿ ಇಷ್ಟವಿಲ್ಲದ ಕ್ಷೇತ್ರದಲ್ಲಿ ಶಿಕ್ಷಣ ಕೊಡಿಸುವ ಕೆಲಸವಾಗಬಾರದು ಎಂದು ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಪಾಲಕರಿಗೆ ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊಮಾ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಂಗಳವಾರ ಪಟ್ಟಣದ ಎಂಆರ್‌ಪಿ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಕ್ಕಳು ಸಾಧನೆ ಮಾಡಲು ಬಯಸುವ ಕ್ಷೇತ್ರದಲ್ಲಿಯೇ ಅವಕಾಶ ನೀಡಿದಾಗ ಅಂದುಕೊಂಡಂತೆ ಗುರಿ ಮುಟ್ಟಲು ಸಾಧ್ಯವಾಗಲಿದೆ. ಆದರೆ ಪಾಲಕರ ಒತ್ತಡಕ್ಕೆ ಕೆಲವು ಪ್ರತಿಭಾನ್ವಿತ ಮಕ್ಕಳು ಇಷ್ಟವಿಲ್ಲದ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಗುರಿ ಸಾಧಿಸಲು ಆಗುತ್ತಿಲ್ಲ. ಆದ್ದರಿಂದ ಪಾಲಕರು ಶಿಕ್ಷಣ ಆಯ್ಕೆ ವಿಷಯವನ್ನು ಮಕ್ಕಳಿಗೆ ಬಿಡಬೇಕು ಎಂದು ಹೇಳಿದರು.

ಜ್ಞಾನದ ಪರಿಪೂರ್ಣತೆಯಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಈ ಹಿಂದೆ ವಿದ್ಯೆ ಎಂಬುದು ಒಂದು ಸಮಾಜಕ್ಕೆ ಮಾತ್ರ ಎಂಬಂತೆ ಸೀಮಿತವಾಗಿತ್ತು. ಆದರೆ ಇಂದು ವಿದ್ಯೆ ಒಂದು ಸಮಾಜದ ಸ್ವತ್ತಾಗಿಲ್ಲ. ಮಕ್ಕಳಿಗೆ ಅಕ್ಷರ ಜ್ಞಾನದ ಜತೆಗೆ ಸಮಾಜ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿಸುವ ಕೆಲಸವಾಗಬೇಕು. ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಿದಾಗ ಉತ್ತಮ ಫಲಿತಾಂಶ ಬರಲಿದೆ ಎಂದರು.

ಮಕ್ಕಳನ್ನೇ ಆಸ್ತಿ ಮಾಡಿ: ಮಕ್ಕಳಿಗೆ ಸಂಪತ್ತು ಮಾಡಿಕೊಡಲು ಜೀವನಪೂರ್ತಿ ದುಡಿಯುವ ಬದಲು ಅವರಿಗೆ ಶಿಕ್ಷಣ, ನಡೆ-ನುಡಿ ಕಲಿಸುವ ಮೂಲಕ ಅವರನ್ನೇ ಆಸ್ತಿಯನ್ನಾಗಿಸಿದಾಗ ಜೀವನ ಸಾರ್ಥಕತೆ ಪಡೆಯಲಿದೆ. ಯುವಪೀಳಿಗೆ ಎಷ್ಟೇ ಓದಿದರೂ ಕೃಷಿಯಿಂದ ವಿಮುಖರಾಗಬಾರದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಮಂಗಳೂರು, ಉಡುಪಿ, ಮಡಿಕೇರಿ ಭಾಗದ ಮಕ್ಕಳು ಮಾತ್ರ ಪ್ರತಿಭಾನ್ವಿತರು ಎನ್ನುವ ಮಾತಿದೆ. ಹಳೇ ಮೈಸೂರು ಭಾಗದಲ್ಲಿ ಆದಿಚುಂಚನಗಿರಿ ಮಠ ಶಿಕ್ಷಣದ ಹಬ್ ಆಗಿದೆ. ಆದಿಚುಂಚನಗಿರಿ ಕ್ಷೇತ್ರದ ವಿದ್ಯಾಸಂಸ್ಥೆಗಳಲ್ಲಿ ಕಲಿತರೆ ವಿದ್ಯೆಯ ಜತೆಗೆ ಸಂಸ್ಕಾರ ಕೂಡ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.

ನನ್ನ ಈ ಮಟ್ಟಕ್ಕೆ ಬೆಳೆಯಲು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮಾರ್ಗದರ್ಶನ ಹಾಗೂ ಬಾಲಗಂಗಾಧರನಾಥ ಶ್ರೀಗಳ ಆಶೀರ್ವಾದ ಕಾರಣ. ನಾನು ರಾಜಕಾರಣಕ್ಕೆ ಬರುವುದಕ್ಕಿಂತ ಮೊದಲು ತಾಲೂಕಿನಲ್ಲಿ 6-7 ಪ್ರೌಢಶಾಲೆಗಳಿದ್ದವು. ನಂತರದಲ್ಲಿ 25ಕ್ಕಿಂತ ಹೆಚ್ಚು ಶಾಲೆಗಳನ್ನು ಮಾಡಿದ್ದೇನೆ. 5-6 ಪದವಿ ಪೂರ್ವ ಕಾಲೇಜುಗಳಿದ್ದು, ಅವು ಈಗ ಹತ್ತಾಗಿವೆ. ಇದರೊಂದಿಗೆ ಪಟ್ಟಣಕ್ಕೆ ಮಹಿಳಾ ಜೂನಿಯರ್ ಕಾಲೇಜು ತಂದಿದ್ದೇನೆ ಎಂದರು.

ವಿದ್ಯೆ ಜತೆಗೆ ಸಂಸ್ಕಾರ ಕಲಿಸಿ: ಶಿಕ್ಷಕರು ಬೆಳಗ್ಗೆ 10ಕ್ಕೆ ಹೋಗಿ 5ಕ್ಕೆ ಮನೆಗೆ ಬರುವವರಾಗಿದ್ದಾರೆ. ಹಿಂದಿನ ಶಿಕ್ಷಕರಿಗಿದ್ದ ಬದ್ಧತೆ ಈಗಿನ ಶಿಕ್ಷಕರಲ್ಲಿ ಇಲ್ಲವಾಗಿದೆ. ಪಠ್ಯದ ಸಾಮಾನ್ಯ ಜ್ಞಾನವನ್ನು ಮಕ್ಕಳಿಗೆ ಕೊಡುವ ಮನೋಭಾವ ಶಿಕ್ಷಕರಿಗೆ ಬೇಕಿದೆ. ಬಹುತೇಕ ಐಎಎಸ್, ಕೆಎಎಸ್ ಹಾಗೂ ವೈದ್ಯರೆಲ್ಲರೂ ಸರ್ಕಾರಿ ಶಾಲೆಯಲ್ಲಿ ಕಲಿತವರಿದ್ದಾರೆ. ಹಾಗಾಗಿ ಶಿಕ್ಷಕರು ಮತ್ತು ಪಾಲಕರು ಪುಸ್ತಕದ ಜ್ಞಾನದ ಜತೆಗೆ ಸಂಸ್ಕಾರಯುತ ಶಿಕ್ಷಣವನ್ನೂ ಕಲಿಸಿಕೊಡಿ ಎಂದರು.

ವಿರೋಧಿಗಳು ಬುರುಡೆ ಭಾಷಣಕ್ಕೆ ಸೀಮಿತ: ತಾಲೂಕಿನಲ್ಲಿ ಬೇರೆಯವರು ಭಾಷಣ, ಟೀಕೆ ಮಾಡಬಹುದು. ಆದರೆ ನಾನು ಕೆಲಸ ಮಾಡಿದ್ದೇನೆ, ಮಾಡುತ್ತೇನೆ, ವಿರೋಧಿಗಳು ಏನೆಲ್ಲ ಸುಳ್ಳು ಬುರುಡೆ ಬಿಡುತ್ತಾರೆ ಬಿಡಲಿ. ಚುನಾವಣೆಗಳು ಆ ಬುರುಡೆ ಭಾಷಣದ ಮೇಲೆ ನಡೆಯುವುದಿಲ್ಲ. ಬದಲಾಗಿ ಅಭಿವೃದ್ಧಿ ಕೆಲಸಗಳು ಹಾಗೂ ನಮ್ಮ ನಡವಳಿಕೆಯ ಮೇಲೆ ನಡೆಯುತ್ತದೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಹೆಸರು ಹೇಳದೆ ಟಾಂಗ್ ನೀಡಿದರು.

ಉದ್ಯೋಗದ ಆಸೆಯಿಂದ ಓದಬೇಡಿ: ಯುವಪೀಳಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಓದಿದವರಿಗೆಲ್ಲ ಕೆಲಸ ಸಿಗಲಿದೆ ಎಂಬುದು ದೂರದ ಮಾತು. ಹಾಗಾಗಿ ಉದ್ಯೋಗಕ್ಕಾಗಿಯೇ ಸೀಮಿತವಾಗಿ ಓದುವುದು ಬೇಡ. ಓದಿದವರಿಗೆಲ್ಲ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಬದಲಾಗಿ ಜ್ಞಾನ ವೃದ್ಧಿಗಾಗಿ ಓದಿ ಎಂದು ವಿದ್ಯಾರ್ಥಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಕಿವಿಮಾತು ಹೇಳಿದರು.

333 ವಿದ್ಯಾರ್ಥಿಗಳಿಗೆ ಸನ್ಮಾನ: ತಾಲೂಕಿನ ಸರ್ಕಾರಿ, ಅನುದಾನಿತ, ಖಾಸಗಿ ಹಾಗೂ ವಸತಿ ಶಾಲೆಗಳು, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಹಾಗೂ ಡಿಪ್ಲೊಮಾ ಕಾಲೇಜಿನ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ 333 ವಿದ್ಯಾರ್ಥಿಗಳಿಗೆ ಅಭಿನಂದನಾ ಸ್ಮರಣಿಕೆ ಹಾಗೂ ಪ್ರೋತ್ಸಾಹಧನ ನೀಡುವ ಮೂಲಕ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ಡಿಡಿಪಿಯು ಚಲುವರಾಜು, ಬಿಇಒ ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದಿನೇಶ್, ನಾಗಮಂಗಲ ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೆಂಕಟೇಶ್, ಬ್ರಹ್ಮದೇವರಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಮುಖಂಡರಾದ ಎನ್.ಲಕ್ಷ್ಮೀಕಾಂತ್, ಸುನೀಲ್ ಲಕ್ಷ್ಮೀಕಾಂತ್, ಎನ್.ಟಿ.ಕೃಷ್ಣಮೂರ್ತಿ, ತಿಮ್ಮರಾಯಿಗೌಡ, ಪ್ರಕಾಶ್ ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net