ಮಕ್ಕಳ ಬಿಸಿಯೂಟದಲ್ಲಿ ಹುಳು, ಕೂದಲು

mkg1a
Published on

ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ಕಳಪೆ ಆಗಿದ್ದು, ಬೇಸತ್ತ ಮಕ್ಕಳು ಮನೆಯಿಂದ ಊಟ ತರುತ್ತಿದ್ದಾರೆ.

ಹಾಲೇಹಳ್ಳಿ, ಹಿರೇಮಲ್ಲನಹೊಳೆ, ಗೊಲ್ಲರಹಟ್ಟಿ, ತಾಯಿಟೋಣಿ, ಮೂಡಲಮಾಚಿಕೆರೆ ಗ್ರಾಮದ 80ಕ್ಕೂ ಅಧಿಕ ಮಕ್ಕಳೂ ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳಿಗೆ ಸರ್ಕಾರ ಬಿಸಿಯೂಟ ನೀಡುತ್ತಿದೆ. ಆದರೆ, ಶಾಲಾ ಆಡಳಿತ ವ್ಯವಸ್ಥೆಯ ನಿರ್ಲಕ್ಷೃವೋ ಅಥವಾ ಸಹಾಯಕರ ಬೇಜವಾಬ್ದಾರಿಯೋ ಗೊತ್ತಿಲ್ಲ. ಕಳೆದ ಐದಾರು ತಿಂಗಳಿಂದಲೂ ಒಂದು ದಿನವೂ ಸರಿಯಾಗಿ ಬಿಸಿಯೂಟ ನೀಡಿಲ್ಲ.

ಆದ್ದರಿಂದ ಮಕ್ಕಳು ಬೆಳಗ್ಗೆ ಶಾಲೆಗೆ ಬರುವಾಗಲೇ ಊಟ ಮತ್ತು ನೀರು ತೆಗೆದುಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ಗಮನಹರಿಸುತ್ತಿಲ್ಲ ಎಂದು ಪ್ರಗತಿಪರ ಹೋರಾಟಗಾರ ಮಹಾಲಿಂಗಪ್ಪ ಆರೋಪಿಸಿದರು.

ಶಾಲೆಯ 80 ಮಕ್ಕಳ ಬಿಸಿಯೂಟಕ್ಕಾಗಿ ನೀಡಿದ ಅಕ್ಕಿ, ತರಕಾರಿ, ಧಾನ್ಯಗಳು ಏನಾಗಿವೆ?, ಎಷ್ಟು ಖರ್ಚಾಗಿವೆ?. ಉಳಿದ ರೇಷನ್ ಏನಾಗಿದೆ ಎಂಬುದರ ಬಗ್ಗೆ ಬಿಸಿಯೂಟ ಸಹಾಯಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಅನ್ನದಲ್ಲಿ ಹುಳು- ಕೂದಲು:
ಶಾಲೆಯ ಅಡುಗೆ ಸಹಾಯಕರು ಶುಚಿ-ರುಚಿಯಾಗಿ ಬಿಸಿಯೂಟ ತಯಾರಿಸುತ್ತಿಲ್ಲ. ಮಂಗಳವಾರ ತಯಾರಿಸಿದ್ದ ಆಹಾರದಲ್ಲಿ ಹುಳುಗಳು, ಕೂದಲು ಸಿಕ್ಕಿವೆ. ಅನ್ನ ಮುಗ್ಗು ವಾಸನೆ ಬೀರುತ್ತಿದೆ. ಶಾಲೆಯ ಆರಂಭದಿಂದಲೂ ಸರಿಯಾಗಿ ಅಡುಗೆ ಮಾಡುತ್ತಿಲ್ಲ. ಸಾಂಬಾರ್ ಉಪ್ಪು, ಹುಳಿ, ಕಾರ ಏನು ಇರುವುದಿಲ್ಲ. ಇಂತಹ ಊಟ ತಿಂದರೆ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಇದನ್ನು ಪ್ರಶ್ನಿಸಿದರೆ ಅಡುಗೆ ಮಾಡುವವರು ಹೆದರಿಸುತ್ತಿದ್ದು, ನಮಗೆ ಬಿಸಿಯೂಟವೇ ಬೇಡ ಎಂದು ವಿದ್ಯಾರ್ಥಿಗಳು ಸಹಾಯಕತೆ ತೋಡಿಕೊಂಡಿದ್ದಾರೆ.
ಬಿಸಿಯೂಟ ಸಹಾಯಕರ ಹೊಂದಾಣಿಕೆ ಕೊರತೆಯಿಂದ ತೊಂದರೆಯಾಗಿದ್ದು, ಸರಿಪಡಿಸಿ ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಜೂನ್ ತಿಂಗಳಿಂದಲೂ ಶಾಲೆ ಆರಂಭವಾಗಿದ್ದು, ಇದೀಗ ರೇಷನ್ ಬಂದಿದ್ದು ವಿತರಣೆ ಮಾಡಲಾಗುತ್ತಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಮುಂಜಾಗರೂಕತೆ ವಹಿಸಲಾಗುವುದು.
-ಶ್ರೀನಿವಾಸ್, ಸಹಾಯಕ ನಿರ್ದೇಶಕ, ಅಕ್ಷರ ದಾಸೋಹ ಇಲಾಖೆ.

ಬಿಸಿಯೂಟ ತಯಾರಿಸುವ ಮಹಿಳೆಯರು ಸರಿಯಾಗಿ ಕೆಲಸ ಮಾಡದಿರುವುದು ಮಕ್ಕಳ ಉಪವಾಸಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಮುಂದೆ ಈ ಘಟನೆ ಮರುಕಳಿಸಿದರೆ ಶಾಲೆಗೆ ಬೀಗಹಾಕಿ ಪ್ರತಿಭಟನೆ ನಡೆಸಲಾಗುವುದು.
-ಮಹಾಲಿಂಗಪ್ಪ ಎಚ್.ಎಂ.ಹೊಳೆ. ಹೋರಾಟಗಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net