

ರಟ್ಟಿಹಳ್ಳಿ: ಪಟ್ಟಣದಲ್ಲಿ ವಿವಿಧೆಡೆ ಅಂಗನವಾಡಿ ಕೇಂದ್ರಗಳಲ್ಲಿ ನಿರ್ಮಿಸಿದ ರ‌್ಯಾಂಪ್ ಬಗ್ಗೆ ಜನ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ರ‌್ಯಾಂಪ್‌ಗಳು ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರ ಬಳಕೆಗೆ ಸೂಕ್ತವಾಗಿಲ್ಲ. ಈಗಾಗಲೇ ಮಕ್ಕಳು ಮತ್ತು ಪಾಲಕರು ಬಿದ್ದು ಸಣ್ಣಪುಟ್ಟ ಗಾಯಮಾಡಿಕೊಂಡಿದ್ದಾರೆ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾ ಮತ್ತು ನಗರಾಭಿವೃದ್ಧಿ ಕೋಶ ಯೋಜನೆಯಡಿ ಒಟ್ಟು 10 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಒಟ್ಟು 11ಕಡೆ ರ‌್ಯಾಂಪ್ ನಿರ್ಮಿಸಲಾಗಿದೆ. ಅಂಗನವಾಡಿ ಸಂಖ್ಯೆ-9ರಲ್ಲಿ ಅತ್ಯಂತ ಎತ್ತರ ಮಟ್ಟದಲ್ಲಿ ನಿರ್ಮಿಸಲಾಗಿದ್ದು, ಹತ್ತಲು ಮತ್ತು ಇಳಿಯಲು ಹರಸಾಹಸ ಪಡಬೇಕಾಗಿದೆ. ಇತ್ತೀಚೆಗೆ ಇಬ್ಬರು ಮಕ್ಕಳು ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ. ಕೇಂದ್ರ 10 ಬಸ್ ನಿಲ್ದಾಣ, 8 ಕುಮಾರೇಶ್ವರ ಶಾಲೆ, 7 ಜನತಾ ಪ್ಲಾಟ್, 1 ದುರ್ಗಾದೇವಿ ನಗರ ಮತ್ತು ಸರ್ಕಾರಿ ಕನ್ನಡ ಶಾಲೆಯ ಬಳಿ ಅವೈಜ್ಞಾನಿಕವಾಗಿ ರ‌್ಯಾಂಪ್ ನಿರ್ಮಿಸಲಾಗಿದೆ. ಮಕ್ಕಳು, ಗರ್ಭಿಣಿಯರ ಸುರಕ್ಷತೆ ಗಮನಿಸಿ ಸಮತಟ್ಟಾಗಿ ಮತ್ತು ಜಾರದಂತೆ ರ‌್ಯಾಂಪ್ ನಿರ್ಮಿಸಬೇಕಾಗಿತ್ತು ಎನ್ನುತ್ತಾರೆ ಮಕ್ಕಳ ಪಾಲಕರು.
ರ‌್ಯಾಂಪ್‌ಗಳ ಅವ್ಯವಸ್ಥೆಯಿಂದಾಗಿ ಗರ್ಭಿಣಿ ಮತ್ತು ಬಾಣಂತಿಯರು ಪಡಿತರ ಪಡೆಯಲು ಹಾಗೂ ಆರೋಗ್ಯ ತಪಾಸಣೆಗೆ ಬರುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ರ‌್ಯಾಂಪ್ ತೆರವುಗೊಳಿಸಬೇಕು ಅಥವಾ ತೊಂದರೆಯಾಗದಂತೆ ಮರು ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಅಂಗನವಾಡಿ ಕೇಂದ್ರಗಳಲ್ಲಿ ನಿರ್ಮಿಸಿರುವ ರ‌್ಯಾಂಪ್‌ಗಳಲ್ಲಿ ಮಕ್ಕಳು ಕಾಲು ಜಾರಿ ಬೀಳುತ್ತಿವೆ. ಇತ್ತೀಚೆಗೆ ನಮ್ಮ ಕುಟುಂಬದ ಮಗುವಿಗೆ ಚುಚ್ಚುಮದ್ದು ಹಾಕಿಸಲು ಹೋದಾಗ ಹತ್ತಿ ಇಳಿಯಲು ತೊಂದರೆಯಾಗಿತ್ತು. ನಾಗರಾಜ ಪವಾರ ಸ್ಥಳೀಯ ನಿವಾಸಿ ಬಸ್ ನಿಲ್ದಾಣ ಬಳಿಯ ಅಂಗನವಾಡಿಗೆ ಮಗನನ್ನು ಕಳುಹಿಸಲು ಹೋದಾಗ ನಾವೇ ಕಾಲು ಜಾರಿ ಬಿದ್ದಿದ್ದೇವೆ. ರ‌್ಯಾಂಪ್ ಬದಲಿಗೆ ಸುರಕ್ಷತೆ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಬೇಕಾಗಿದೆ. ಸುಜಾತಾ ಬೀರೇಶ ನಾಯಕ, ರಟ್ಟಿಹಳ್ಳಿ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಮತ್ತು ಗರ್ಭಿಣಿಯರು ಹತ್ತಿ ಇಳಿಯಲು ತೊಂದರೆಯಾಗದಂತೆ ರ‌್ಯಾಂಪ್ ನಿರ್ಮಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅಲ್ಲದೆ, ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿಯೇ ಮಕ್ಕಳಿಗೆ ತೊಂದರೆಯಾಗದಂತೆ ರ‌್ಯಾಂಪ್ ವ್ಯವಸ್ಥೆ ಮಾಡಲಾಗುವುದು. ಜಯಶ್ರೀ ಪಾಟೀಲ, ಸಿಡಿಪಿಒ