ಮಕ್ಕಳೇ ದೇಶದ ನಿಜವಾದ ಸಂಪತ್ತು

1 vikram 1
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ವಿಟ್​ ಇಂಡಿಯಾ ಚಳವಳಿ ಕರ್ನಾಟಕದಲ್ಲಿ ಹೆಚ್ಚು ಜನಜಾಗೃತಿ ಮೂಡಿಸಿದ ಚಳವಳಿ. ಈ ಚಳವಳಿ ಬ್ರಿಟಿಷ್​ ಸರ್ಕಾರವನ್ನು ದಂಗು ಬಡಿಸಿ ಅವರು ಇಲ್ಲಿಂದ ಕಾಲ್ತೆಗೆಯುವಂತೆ ಮಾಡಿತು ಎಂದು ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ವೀಣಾ ಬಿರಾದಾರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾ ವರ್ಧಕ ಸಂಘದ ಶಿಕ್ಷಣ ಮಂಟಪವು ಸುವರ್ಣ ಕರ್ನಾಟಕ ಸಂಭ್ರಮ ಮತ್ತು ಸ್ವಾತಂತ್ರ್ಯೋತ್ಸವ ನಿಮಿತ್ತ ವೀರಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಕ್ವಿಟ್​ ಇಂಡಿಯಾ ಚಳವಳಿಯಲ್ಲಿ ಧಾರವಾಡ ಜಿಲ್ಲಾ ಹೋರಾಟಗಾರರ ಪಾತ್ರ ಕುರಿತು ಮಾತನಾಡಿದರು.
1942ರ ಆ. 9ರಂದು ಗಾಂಧೀಜಿ ಅವರು ಭಾರತ ಬಿಟ್ಟು ತೊಲಗಿ ಚಳವಳಿ ಪ್ರಕಟಿಸಿದಾಗ ಬ್ರಿಟಿಷ ಸರ್ಕಾರ ಗಾಂಧೀಜಿ ಹಾಗೂ ಅನೇಕ ರಾಷ್ಟ್ರ ನಾಯಕರನ್ನು ದಸ್ತಗಿರಿ ಮಾಡಿತು. ರೊಚ್ಚಿಗೆದ್ದ ಹೋರಾಟಗಾರರು ಸರ್ಕಾರಿ ಕಚೇರಿ, ರೈಲು ಕಂಬಿ, ನಿಲ್ದಾಣಗಳನ್ನು ಧ್ವಂಸಗೊಳಿಸಿದರು. ಖಜಾನೆಗಳನ್ನು ಲೂಟಿ ಮಾಡಿದರು. ವಿದ್ಯಾರ್ಥಿಗಳು ಶಾಲೆ, ಕಾಲೇಜು ಬಹಿಷ್ಕರಿಸಿದರೆ, ವಕೀಲರು ನ್ಯಾಯಾಲಯಗಳಿಗೆ ಬಹಿಷ್ಕಾರ ಹಾಕಿದರು. ಕರ್ನಾಟಕದಲ್ಲಿ ಈ ಚಳವಳಿ ಅತ್ಯಂತ ಪ್ರಖರವಾಗಿತ್ತು. ರಂಗನಾಥ ದಿವಾಕರ, ಡಿ.ಪಿ. ಕರ್ಮಕರ, ಶಂಕರ ಕುರ್ತಕೋಟಿ, ಮೈಲಾರ ಮಹಾದೇವಪ್ಪ, ಆರ್​.ಎಸ್​. ಹುಕ್ಕೇರಿಕರ, ಶಕುಂತಲಾ ಕುರ್ತಕೋಟಿ, ಸೇರಿ ಇತರ ಹೋರಾಟಗಾರರು ಬಂಧನಕ್ಕೆ ಗುರಿಯಾದರು ಎಂದರು.
ಚಂದ್ರಕಾಂತ ಬೆಲ್ಲದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳೇ ದೇಶದ ನಿಜವಾದ ಸಂಪತ್ತು. ವಿದ್ಯಾರ್ಥಿಗಳು ಕುಟುಂಬದ ಆಸ್ತಿ ಮಾತ್ರವಲ್ಲ. ದೇಶದ ನಿಜವಾದ ಜೀವಂತ ಸಂಪತ್ತು ಆಗಬೇಕು. ಶಾಲಾ ದಿನಗಳಲ್ಲಿ ನೀವು ನಾಯಕರಾಗಿ ಬೆಳೆದರೆ ಮುಂದೆ ಈ ದೇಶಕ್ಕೂ ನಾಯಕರಾಗಬಹುದು ಎಂದರು.
ಮಂಗಳಗೌರಿ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ನರೇಗಲ್​, ಈರನಗೌಡ ಪಾಟೀಲ, ಭೀಮನಗೌಡ ಪಾಟೀಲ, ಸುನಂದಾ ಹಳ್ಳೂರ, ಸುವರ್ಣಾ ಪಾಟೀಲ, ಪ್ರತಿಭಾ ಪಾಟೀಲ, ಪ್ರಕಾಶ ಭಾಗಡೆ, ಇತರರು ಇದ್ದರು.
ಮಹಾದೇವಿ ಪಾಟೀಲ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎ. ಬೆಣ್ಣಿ ನಿರೂಪಿಸಿದರು. ಸುರೇಶ ಮುಗಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net