

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಆರೋಗ್ಯವಾಗಿರಲು ಉಸಿರಾಡುವ ಹವೆ ಶುದ್ಧವಾಗಿರಬೇಕು. ನಮ್ಮ ಸುತ್ತಲಿನ ಪರಿಸರ ಶುದ್ಧವಾಗಿರಬೇಕು. ಇದಕ್ಕಾಗಿ ಗುಬ್ಬಚ್ಚಿ ಗೂಡು ಶಾಲೆ ಮಕ್ಕಳು ಮಕ್ಕಳ ದಿನಾಚರಣೆಯಂದು ಇನ್ನು ಮುಂದೆ ಪಟಾಕ್ಷಿ ಹಚ್ಚುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಉಳಿದ ಶಾಲೆ ಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದು ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ನುಡಿದರು.
ನಗರದ ಗುಬ್ಬಚ್ಚಿಗೂಡು ಶಾಲೆ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಕ್ಕಳ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳೇ ದೇಶದ ನಿಜವಾದ ಸಂಪತ್ತು. ಈ ಸಂಪತ್ತನ್ನು ಸರಿಯಾದ ರೀತಿ ನೋಡಿಕೊಳ್ಳುವ ಜವಾಬ್ದಾರಿ ಸಮಾಜ ಮತ್ತು ಸರ್ಕಾರದ ಕರ್ತವ್ಯ. ಪ್ರತಿ ಮಗುವೂ ಒಂದಿಲ್ಲ ಒಂದು ಪ್ರತಿಭೆ ಹೊಂದಿದ್ದು, ಆ ಪ್ರತಿಭೆ ದೇಶದ ಅಭಿವೃದ್ಧಿಗೆ ಪೂರಕವಾಗಿ ನಿಲ್ಲಬಲ್ಲದು ಎಂಬ ಭರವಸೆ ಹೊಂದಬೇಕು. ಮಕ್ಕಳಲ್ಲಿ ಸಮಯ ಪ್ರಜ್ಞೆ, ಸ್ವಯಂ ಶಿಸ್ತು, ಇನ್ನೊಬ್ಬರ ಬಗ್ಗೆ ಆದರ ತೋರುವುದನ್ನು ರೂಢಿಸಿಕೊಳ್ಳುವಂತೆ ಮಾಡಿದಾಗ ಮಾತ್ರ ನಿಜವಾದ ಪಾಲಕರೆಂದು ಕರೆಯಿಸಿಕೊಳ್ಳುವರು ಎಂದರು.
ವಿ.ಎನ್. ಕೀರ್ತಿವತಿ ಮಾತನಾಡಿ, ಎಳೆಯ ಮನಸ್ಸಿನಲ್ಲಿ ಉದಾತ್ತ ಗುಣ ಅಳವಡಿಸಿಕೊಳ್ಳುವಂತೆ ಮಾಡುವುದು ಪ್ರತಿ ಶಾಲೆಯ ಧ್ಯೇಯವಾಗಬೇಕು. ಮಕ್ಕಳನ್ನು ಪರೀಕ್ಷೆ ದೃಷ್ಟಿಯಲ್ಲಿ ಇಟ್ಟುಕೊಂಡು ಶಿಕ್ಷಣ ನೀಡದೆ ಸರ್ವಾಂಗೀಣ ಏಳಿಗೆ ದೃಷ್ಟಿಯಿಂದ ಶಿಕ್ಷಣ ನೀಡಬೇಕು ಎಂದರು.
ಮಕ್ಕಳ ಸಾಹಿತಿ ನಿಂಗಣ್ಣ ಮಾತನಾಡಿದರು. ಶಾಲೆ ಅಧ್ಯಕ್ಷ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಲ್.ವಿ ರಾಮಾಪುರ, ವಿಜಯಲಕ್ಷ್ಮೀ ಸಂಭಾಜಿ, ಸಿಕಂದರ ದಂಡಿನ, ಮಂಜುನಾಥ ಭಜಂತ್ರಿ, ಲಕ್ಷ್ಮಣ ಲಮಾಣಿ, ಭಾರತಿ ಸಾಬಳೆ, ಲತಾ ಹನಮನಳ್ಳಿ, ಪ್ರಗತಿ ಸಾಬಳೆ, ಶಂಕರ ರಾಚಯ್ಯನವರ, ಇತರರು ಇದ್ದರು.