

ನಾಪೋಕ್ಲು: ಹದಿನೆಂಟು ಬಗೆಯ ಔಷಧೀಯ ಗುಣಗಳು ಸೇರುವ ಮದ್ದುಸೊಪ್ಪಿನ ಬಳಕೆಯ ಆಚರಣೆ ಕಕ್ಕಡ-18 ಅನ್ನು ವೈಶಿಷ್ಟಪೂರ್ಣವಾಗಿ ಆಚರಿಸಬೇಕು ಎಂದು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಹೇಳಿದರು.
ಇಲ್ಲಿಯ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ಭಾನುವಾರ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಕಕ್ಕಡ- 18 ತೀನಿ ನಮ್ಮೆ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಭತ್ತದ ಕೃಷಿ ಮಾಡುವ ರೈತರಲ್ಲಿ ಸಂತೋಷ ಇತ್ತು. ಸಂಭ್ರಮ ಇತ್ತು. ಇಂದು ಅದೆಲ್ಲವೂ ಮರೆಯಾಗಿದೆ. ಮಕ್ಕಳಿಗೆ ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲ. ರೈತರಿಗೆ ಖುಷಿ, ತೃಪ್ತಿ, ಸಂತೋಷ ಇಲ್ಲ ಗದ್ದೆಗಳೆಲ್ಲ ಪಾಳು ಬಿದ್ದಿವೆ. ಒಂದಷ್ಟು ಭಾಗ ಅಡಿಕೆ, ಕಾಫಿ ತೋಟಗಳಾಗಿವೆ. ಗತವೈಭವದ ಸಂತೋಷ, ಸಂಭ್ರಮವನ್ನು ಕಾಣಬೇಕಿದ್ದರೆ ಇಂದಿನ ಯುವ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಭತ್ತದ ಗದ್ದೆಗಳಲ್ಲಿ ಅಗೆ ತೆಗೆಯುವುದು ಹೇಗೆ, ನಾಟಿ ಮಾಡುವುದು ಹೇಗೆ ಎಂಬ ಬಗ್ಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತರಬೇತಿ ನೀಡುವ ಅಗತ್ಯವಿದೆ ಎಂದರು.
ಕಾರ್ಯಕ್ರಮವನ್ನು ಕೊಳಕೇರಿಯ ಕಾಫಿ ಬೆಳೆಗಾರ್ತಿ ಬಿದ್ದಾಟಂಡ ಸುಮನ್ ಪ್ರದೀಪ್ ಉದ್ಘಾಟಿಸಿ ಮಾತನಾಡಿ, ನಿಸರ್ಗದತ್ತವಾದ ಆಹಾರ ಬಳಕೆ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ನಾವು ಪಡೆಯಬಹುದು. ಕೊಡಗಿನಲ್ಲಿ ಕೊಡಗಿನ ಹವಾಗುಣಕ್ಕೆ ತಕ್ಕಂತೆ ಆಹಾರ ಪದ್ಧತಿ ಕ್ರಮ ಇದ್ದು, ಅದನ್ನು ನಮ್ಮ ಹಿರಿಯರು ಪಾಲಸಿಕೊಂಡು ಇಲ್ಲಿಯವರೆಗೆ ಬಂದಿದ್ದಾರೆ. ಇನ್ನು ಮುಂದಕ್ಕೂ ಕೂಡ ಈ ಪದ್ಧತಿ ಮುಂದುವರಿಯಬೇಕು. ಕೊಡಗಿನ ಮಹಿಳೆಯರು ಅಡುಗೆ ತಯಾರಿಸುವಲ್ಲಿ ನೈಪುಣ್ಯ ಹೊಂದಿದ್ದಾರೆ. ಎಲ್ಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆ ಬರಬೇಕು. ಒಗ್ಗಟ್ಟು, ಐಕ್ಯತೆ ಕಾಪಾಡಿಕೊಳ್ಳಬೇಕು ಎಂದರು.
ಬ್ಯಾಂಕ್ ಆಫ್ ಮಹಾರಾಷ್ಟ್ರದ ನಿವೃತ್ತ ವ್ಯವಸ್ಥಾಪಕಿ ಕೋಡಿಮಣಿಯಂಡ ರಚನ ಕುಟ್ಟಪ್ಪ ಮಾತನಾಡಿ, ಕಕ್ಕಡ 18ರ ತಿನಿಸುಗಳ ಹಬ್ಬ ಎಲ್ಲರೂ ಸಂಘಟಿತರಾಗಲು ಒಂದು ಉತ್ತಮ ವೇದಿಕೆಯಾಗಿದೆ. ಸಂಘ-ಸಂಸ್ಥೆಗಳ ನೆರವಿನಿಂದ ಕೃಷಿ ಚಟುವಟಿಕೆಗಳ ಪುನಶ್ಚೇತನ ಅಗತ್ಯ ಇದೆ ಎಂದರು.
ಕೊಡವ ಸಮಾಜ ಮೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಳೆಯಡ ನಿಷಾ ಮೇದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಿನಿಸುಗಳ ಪ್ರದರ್ಶನವನ್ನು ನೆಲಜಿ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಮಣವಟ್ಟಿರ ಕಮಲ ಬೆಳ್ಳಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಸಿರ್ಂಗ್ ಸೂಪರಿಟೆಂಡೆಂಟ್ ಗ್ರೇಡ್-2. , ಬಾಳೆಯಡ ರತಿ ಪೆಮ್ಮಯ್ಯ ಹಾಗೂ ಗೋಣಿಕೊಪ್ಪದ ಕಾವೇರಿ ಕಾಲೇಜಿನ ಉಪನ್ಯಾಸಕಿ ಚೀಯಕಪೂವಂಡ ಸವಿತಾ ಅಪ್ಪಚ್ಚು ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಕ್ಕಡ ತೀನಿರ ಭೋಜ ಎಂಬ ವಿಷಯದ ಕುರಿತು ಪುಲಿಕೋಟು ಗ್ರಾಮದ ಲೇಖಕಿ ಕರವಂಡ ಸೀಮಾ ಗಣಪತಿ ವಿಚಾರ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕೊಡವ ತಿನಿಸುಗಳ ಪ್ರದರ್ಶನ ಮತ್ತು ತಯಾರಿ ಸ್ಪರ್ಧೆ ಹಾಗೂ ಇನ್ನಿತರ ಕ್ರೀಡೆ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ವಿಜೇತರಾದವರಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು. ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಕನ್ನಂಬೀರ ಸ್ವರ್ಣ, ಕೋಟೆರ ಬಾನು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು .