ಪತಿ-ಪತ್ನಿ ಜಗಳಕ್ಕೆ ಕಂದಮ್ಮಗಳ ಬಲಿ

Children murder
Published on

ರಾಣೆಬೆನ್ನೂರ: ಗಂಡ- ಹೆಂಡತಿ ನಡುವೆ ಉಂಟಾಗಿದ್ದ ಜಗಳಕ್ಕೆ ಎರಡು ಕಂದಮ್ಮಗಳನ್ನು ಬಲಿಕೊಟ್ಟ ಧಾರುಣ ಘಟನೆ ತಾಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ಮೇ 11ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಭುವನ ಪಾಟೀಲ (6) ಹಾಗೂ ಚೇತನ ಪಾಟೀಲ (3) ಹತ್ಯೆಗೀಡಾದ ಕಂದಮ್ಮಗಳು. ಇವರ ತಾಯಿ ಸುನೀತಾ ಪಾಟೀಲ, ತಂದೆ ಮಂಜಯ್ಯ ಪಾಟೀಲ ಹಾಗೂ ಮಂಜಯ್ಯನ ಸಹೋದರ ಕೊಲೆ ಆರೋಪಿಗಳು.

ಪತಿಯೊಂದಿಗಿನ ಜಗಳದಿಂದ ಆಕ್ರೋಶಗೊಂಡ ತಾಯಿ ಸುನೀತಾ, ತನ್ನ ಮಕ್ಕಳ ಕತ್ತು ಹಿಸುಕಿ ಕೊಲೆಗೈದಿದ್ದಳು. ನಂತರ ಪೊಲೀಸರಿಗೆ ವಿಷಯ ತಿಳಿಸದೇ ಎರಡು ಕಂದಮ್ಮಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಮಂಜಯ್ಯನ ತಾಯಿ ಹಲಗೇರಿ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ ಬಳಿಕ ಪ್ರಕರಣ ಬಯಲಾಗಿದೆ. ತಕ್ಷಣ ಪ್ರಕರಣ ದಾಖಲಿಸಿಕೊಂಡ ಹಲಗೇರಿ ಠಾಣೆ ಪೊಲೀಸರು ಸುನೀತಾ ಮಂಜಯ್ಯ ಪಾಟೀಲ, ಮಂಜಯ್ಯ ಪಾಟೀಲ ಹಾಗೂ ಮಂಜಯ್ಯನ ಸಹೋದರನನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ ತಿಳಿಸಿದ್ದಾರೆ.

ಏನಿದು ಪ್ರಕರಣ?: ಹತ್ತು ವರ್ಷಗಳ ಹಿಂದೆ ಮಂಜಯ್ಯ ಪಾಟೀಲ ಹಾಗೂ ಸುನೀತಾ ಪಾಟೀಲ ಮದುವೆಯಾಗಿದ್ದರು. ಇವರಿಗೆ ಇಬ್ಬರು ಪುತ್ರರು (ಭುವನ ಹಾಗೂ ಚೇತನ) ಇದ್ದರು. ಇತ್ತೀಚೆಗೆ ಮಂಜಯ್ಯ ಪಾಟೀಲಗೆ ತನ್ನ ಪತ್ನಿ ಮೇಲೆ ಸಂಶಯ ಉಂಟಾಗಿದ್ದು, ಪ್ರತಿದಿನ ಮದ್ಯ ಸೇವಿಸಿ ಬಂದು ಜಗಳವಾಡುತ್ತಿದ್ದ. ಮೇ 11ರಂದು ಇಬ್ಬರ ನಡುವೆ ಜಗಳವಾಗಿತ್ತು. ಇದರಿಂದ ಬೇಸತ್ತ ಸುನೀತಾ ತನ್ನ ಎರಡು ಮಕ್ಕಳ ಕತ್ತು ಹಿಸುಕಿ ಕೊಲೆಗೈದು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಇದನ್ನು ಗಮನಿಸಿದ ಅತ್ತೆ- ಮಾವ ಬಂದು ಸುನೀತಾಳನ್ನು ರಕ್ಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಏನೂ ತಪ್ಪು ಮಾಡದ ಎರಡು ಕಂದಮ್ಮಗಳು ಇದೀಗ ಬಾರದ ಲೋಕಕ್ಕೆ ತೆರಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net