

ಮೈಸೂರು: ವೇಗದ ಜಗತ್ತಿನಲ್ಲಿ ಸಹಜ ಬಾಲ್ಯದ ಸುಖದಿಂದ ಇಂದಿನ ಮಕ್ಕಳು ವಂಚಿತರಾಗುತ್ತಿದ್ದಾರೆ ಎಂದು ರಂಗ ನಿರ್ದೇಶಕಿ ನಾಟ್ಯ ವಿದುಷಿ ಡಾ.ಶಾಂಭವಿಸ್ವಾಮಿ ವಿಷಾದಿಸಿದರು.
ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿರುವ 15 ದಿನಗಳ ‘ಬೇಸಿಗೆ ಬಂಡಿ’ ಬೇಸಿಗೆ ಶಿಬಿರಕ್ಕೆ ಇತ್ತೀಚೆಗೆ ರಾಮಕೃಷ್ಣ ನಗರ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದರು.
ಹಿಂದೆ ಇದ್ದ ಬಾಲ್ಯದ ಆಟೋಟಗಳು ಇಂದಿನ ಕಂಪ್ಯೂಟರ್, ಮೊಬೈಲ್, ಟಿವಿಯಲ್ಲಿ ಕಳೆದು ಹೋಗುತ್ತಿವೆ. ದೈಹಿಕ, ಮಾನಸಿಕ ವಿಕಾಸ ಚಟುವಟಿಕೆಗಳು ಕಾಣೆಯಾಗುತ್ತಿವೆ. ರಜಾಕಾಲದ ಬೇಸಿಗೆ ಶಿಬಿರಗಳಲ್ಲಿ ನಮ್ಮ ಕಳೆದು ಹೋಗುತ್ತಿರುವ ಪರಂಪರೆ ನೆನಪಿಸುವ ಬಾಲ್ಯದ ಬದುಕಿನ ಅನಭವ ದೊರಕಿಸಿಕೊಡುವ ಚಟುವಟಿಕೆ ರೂಪಿಸುತ್ತಿರುವುದು ಶ್ಲಾಘನೀಯ. ಇಂತಹ ಶಿಬಿರದ ಮೂಲಕ ನೈಜ ಬಾಲ್ಯದ ಸವಿ ಸವಿಯಲು ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಈ ಶಿಬಿರದಲ್ಲಿ ದೇಸಿ ಆಟೋಟಗಳು ಜನಪದ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವುದನ್ನು ಹಾಗೂ ಹಳ್ಳಿಯ ಸೊಗಡು, ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಹಾಗೂ ಸಂಸ್ಕಾರವನ್ನು ಹೇಳಿಕೊಡುವ ದೂರದೃಷ್ಟಿತ್ವ ಹೊಂದಿದೆ ಎಂದು ಪ್ರಶಂಸಿಸಿದರು.
ಜನಪದ ಮೆರವಣಿಗೆಯಲ್ಲಿ ಎತ್ತಿನ ಗಾಡಿಯಲ್ಲಿ ಮಕ್ಕಳನ್ನು ಕೂರಿಸಿ ವಿವಿಧ ಜನಪದ ಕಲಾಮೇಳಗಳೊಂದಿಗೆ ರಾಮಕೃಷ್ಣ ನಗರ ಮತ್ತು ಕುವೆಂಪು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯ ಮೂಲಕ ಶಿಬಿರದ ಕೇಂದ್ರ ಸ್ಥಳ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಕನಕದಾಸನಗರದ ಆವರಣ ತಲುಪಿದರು.
ಸಂಸ್ಥೆ ಅಧ್ಯಕ್ಷ ಆರ್.ರಘು, ಉಪ ಪ್ರಾಂಶುಪಾಲೆ ಶೀನಾ ಕೆ.ಗುರ್ನಾನಿ, ಶಿಬಿರದ ಸಂಚಾಲಕಿ ಭಾವನಾ ಶ್ರೀಕಾಂತ್, ಶಾಲಾ ಸಿಬ್ಬಂದಿ, ಪಾಲಕರು ಇದ್ದರು.