ಬೀದಿನಾಯಿ ದಾಳಿಯಿಂದ ಮಗುವಿಗೆ ಗಂಭೀರ ಗಾಯ

stray dogs
kerala stray dog attack
Published on

ಮೈಸೂರು: ಗುಂಡೂರಾವ್ ನಗರದಲ್ಲಿ ಮೂರೂವರೆ ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿದೆ.


ಎಪಿಎಂಸಿಯಲ್ಲಿ ಸೆಕ್ಯುರಿಟಿ ಗಾರ್ಡ್ ಯೋಗೇಶ್ ಹಾಗೂ ಕಾವ್ಯಾ ದಂಪತಿ ಪುತ್ರಿ ವರ್ಷಾ ಗಾಯಗೊಂಡಿರುವ ಬಾಲಕಿ.
ಪಕ್ಕದಲ್ಲೇ ಇರುವ ಅಜ್ಜಿ ಮನೆಗೆ ಬಂದು, ಅಲ್ಲಿಂದ ಚಾಕಲೇಟ್ ತೆಗೆದುಕೊಳ್ಳಲೆಂದು ಅಂಗಡಿಗೆ ಹೋಗುತ್ತಿದ್ದಾಗ ಏಕಾಏಕಿ ನಾಯಿ ದಾಳಿ ಮಾಡಿದೆ. ಮಗುವಿನ ಎರಡೂ ಕೆನ್ನೆ, ಕಿವಿ, ತಲೆಗೆ ಕಚ್ಚಿ, ಓಡಿ ಹೋಗಿದೆ. ಮಗುವಿಗೆ ಐದಾರು ಕಡೆ ಗಾಯಗಳಾಗಿವೆ.


ನೋವಿನಿಂದ ನರಳುತ್ತಿದ್ದ ಮಗುವನ್ನು ಆಕೆಯ ಅಜ್ಜಿ ಕೆಆರ್‌ಎಸ್ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಪುಟ್ಟ ಮಗು ನೋವು ಸಹಿಸಲಾರದೆ ನರಳುತ್ತಿದೆ ಎಂದು ಮನೆಯವರು ನೊಂದು ನುಡಿದರು.
ಇದೇ ಬಡಾವಣೆಯಲ್ಲಿ ನಾಯಿ ದಾಳಿಯಿಂದ ಇತ್ತೀಚೆಗೆ ಇಬ್ಬರು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಹೋಗುವಾಗ ಏಕಾಏಕಿ ದಾಳಿ ಮಾಡಿ, ಕಚ್ಚಿ ಓಡಿ ಹೋಗಿದೆ. ಇದೀಗ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ನಾಯಿಗಳ ದಾಳಿಗೆ ಪಾಲಿಕೆಯೇ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡೂರಾವ್ ನಗರದಲ್ಲಿ ನಾಯಿ ಹಾವಳಿ ಹೆಚ್ಚಾಗಿದೆ. ಮೇಲಿಂದ ಮೇಲೆ ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ವಹಿಸಿಲ್ಲ. ಈ ಘಟನೆ ಕುರಿತು ವಿಷಯ ತಿಳಿಸಿದರೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net