ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯ?

child
ಸಾಂದರ್ಭಿಕ ಚಿತ್ರ
Published on

ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ತಂದ ದಂಪತಿ ಅಕ್ರಮ ದತ್ತು ಪಡೆದ ದೂರು ಬೆನ್ನಲ್ಲೇ ಪ್ರಕರಣ ಬೆಳಕಿಗೆ



ವಿಜಯವಾಣಿ ಸುದ್ದಿಜಾಲ ರಾಮನಗರ


ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿದೆಯೇ? ಇಂತಹದೊಂದು ಪ್ರಶ್ನೆ ಚನ್ನಪಟ್ಟಣದಲ್ಲಿ ನಡೆದಿರುವ ಘಟನೆಯಿಂದ ಹುಟ್ಟಿಕೊಂಡಿದೆ.
ಹೌದು... ಕುಟುಂಬದ ಸದಸ್ಯರಿಂದಲೇ ಮಗು ದತ್ತುಪಡೆದಿದ್ದೇವೆ ಎಂದ ದಂಪತಿಯನ್ನು ಮಕ್ಕಳ ಸಹಾಯವಾಣಿ ಸಿಬ್ಬಂದಿ ವಿಚಾರಣೆ ನಡೆಸಿದಾಗ ಮಗುವನ್ನು ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ತಂದಿದ್ದಾಗಿ ಹೇಳಿರುವುದು ಇಂತಹ ಪ್ರಶ್ನೆ ಮೂಡಲು ಕಾರಣವಾಗಿದೆ.

ಘಟನೆ ಏನು?:

ಮೂರು ದಿನಗಳ ಹಿಂದೆ ಜಿಲ್ಲೆಯ ಮಕ್ಕಳ ಸಹಾಯವಾಣಿಗೆ ಕರೆಯೊಂದು ಬಂದಿದ್ದು, ಹೆಣ್ಣು ಮಗುವನ್ನು ಅಕ್ರಮವಾಗಿ ದತ್ತು ಪಡೆಯಲಾಗಿದೆ ಎನ್ನುವ ಮಾಹಿತಿಯನ್ನು ದೂರಿನಲ್ಲಿ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಈ ಮಾಹಿತಿ ಜಾಡು ಹಿಡಿದು ಬುಧವಾರ ಚನ್ನಪಟ್ಟಣದ ಮಂಗಳವಾರಪೇಟೆಯ ಮನೆಯೊಂದಕ್ಕೆ ಸಿಬ್ಬಂದಿ ತೆರಳಿದ್ದಾರೆ.
ಈ ವೇಳೆ ಮಗು ನಮ್ಮ ಸಂಬಂಧಿಕರದ್ದು, ಇದನ್ನು ದತ್ತು ಪಡೆದಿದ್ದೇವೆ ಎನ್ನುವ ಉತ್ತರವನ್ನು ದಂಪತಿ ನೀಡಿದ್ದಾರೆ. ಈ ವೇಳೆ ಮಕ್ಕಳ ಸಹಾಯವಾಣಿ ಸಿಬ್ಬಂದಿ ದತ್ತು ತೆಗೆದುಕೊಳ್ಳಬೇಕಾದ ಕಾನೂನು ಪ್ರಕ್ರಿಯೆ ಬಗ್ಗೆ ತಿಳಿಸಿಕೊಡುವ ಜತೆಗೆ, ಅಕ್ರಮವಾಗಿ ದತ್ತು ಪಡೆದರೆ ಏನಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಆ ದಂಪತಿ ಮಗು ಎಲ್ಲಿಂದ ತರಲಾಗಿದೆ ಎನ್ನುವ ಮಾಹಿತಿ ಬಾಯಿಬಿಟ್ಟಿದ್ದಾರೆ.

ಸರ್ಕಾರಿ ಆಸ್ಪತ್ರೆಯಿಂದ ಮಗು?

ಮೊದಲಿಗೆ ಸಂಬಂಧಿಕರ ಮಗು ಎಂದು ಹೇಳಿದ್ದ ದಂಪತಿ ನಂತರ ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ತರಲಾಗಿದೆ ಎನ್ನುವ ಮಾಹಿತಿ ಬಾಯಿ ಬಿಟ್ಟಿದ್ದಾರೆ. ಮತ್ತೊಂದೆಡೆ ಮಗು ಸಿಕ್ಕಿದೆ ಎನ್ನುವ ಹೇಳಿಕೆ ನೀಡುವ ಮೂಲಕ ಪ್ರಕರಣದಲ್ಲಿ ಗೊಂದಲ ಮೂಡಿಸಿದ್ದಾರೆ.
ಒಂದು ವೇಳೆ ಮಗು ಸರ್ಕಾರಿ ಆಸ್ಪತ್ರೆಯಲ್ಲಿಯೇ ಸಿಕ್ಕಿದ್ದರೆ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಜತೆಗೆ, ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿದೆಯೇ ಎನ್ನುವ ಅನುಮಾನ ಹುಟ್ಟಿಹಾಕಿದೆ. ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿಯೇ ಮಕ್ಕಳ ಬದಲಾವಣೆ. ಮಕ್ಕಳ ಕಳವು ಪ್ರಕರಣ ಆಗಾಗ ರಾಜ್ಯದ ನಾನಾ ಕಡೆ ವರದಿ ಆಗಿವೆ. ಅದೇ ರೀತಿ ಇಲ್ಲಿಯೂ ನಡೆದಿದೆಯೇ? ನಡೆದಿದ್ದೇ ಆಗಿದ್ದರೆ ಇದರಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಭಾಗಿಯಾಗಿದ್ದಾರೆಯೇ? ಅಥವಾ ಇವರ ಕಣ್ತಪ್ಪಿಸಿ ಇಂತಹ ಕೃತ್ಯನಡೆಸಲಾಗಿದೆಯೇ ಎನ್ನುವು ಹಲವು ಪ್ರಶ್ನೆಗಳು ಎದ್ದಿವೆ.

ದತ್ತು ಸ್ವೀಕಾರ ಕೇಂದ್ರಕ್ಕೆ

ದಂಪತಿ ಬಳಿ ದೊರೆತಿರುವ ಮಗು ಒಂದು ತಿಂಗಳದ್ದಾಗಿದ್ದು, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಮಗುವಿನ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ಮಗು ಆರೋಗ್ಯದಿಂದ ಇದೆ. ಮಗುವನ್ನು ಮಂಡ್ಯದ ಜೋಗುಳ ದತ್ತು ಸ್ವೀಕಾರ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಅಕ್ರಮವಾಗಿ ಮಗುವನ್ನು ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಮಕ್ಕಳ ಸಹಾಯವಾಣಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಸಿಬ್ಬಂದಿ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ಮಗು ಎಲ್ಲಿ ಯಾರಿಂದ ಸಿಕ್ಕಿತು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಮಗು ಆರೋಗ್ಯವಾಗಿದ್ದು, ಮಂಡ್ಯದ ಜೋಗುಳ ಸಂಸ್ಥೆಯ ವಶಕ್ಕೆ ನೀಡಲಾಗಿದೆ.
ರಜನಿ. ಡಿಸಿಪಿಒ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net