

ಮಂಡ್ಯ: ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡುವ ಜಾಲ ದೊಡ್ಡಮಟ್ಟದಲ್ಲಿ ವಿಸ್ತರಿಸಿದೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಇದರ ಮೂಲ ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.
ತಾಲೂಕಿನ ಹಾಡ್ಯಾ ಗ್ರಾಮದ ಆಲೆಮನೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಆವರು, ಆಧುನಿಕ ಕಾಲದಲ್ಲೂ ಹೆಣ್ಣು ಗಂಡು ಎಂದು ತಾರತಮ್ಯ ಮಾಡಿ ಗರ್ಭದಲ್ಲಿಯೇ ಭ್ರೂಣ ಪತ್ತೆಗೆ ಮುಂದಾಗಿರುವುದು ನಾಚಿಕೆಗೇಡಿನ ವಿಚಾರ. ಹಣಕ್ಕಾಗಿ ನಾಗರಿಕ ಸಮಾಜ ತಲೆತಗ್ಗಿಸುವ ಇಂತಹ ಕೃತ್ಯವನ್ನು ಮಾಡುವುದು ಕ್ರೂರವಾದ ಸಂಗತಿ. ವಿದ್ಯಾವಂತ ಜನತೆ ಇಂತಹ ಕೃತ್ಯಕ್ಕೆ ಇಳಿದಿರುವುದು ನೋವಿನ ವಿಚಾರ. ಸಮಾಜದಲ್ಲಿ ಈಗಾಗಲೇ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂತಹ ಮಾನವ ವಿರೋಧಿ ಕೃತ್ಯವನ್ನ ಎಲ್ಲರೂ ತಡೆಯಬೇಕಾಗಿದೆ ಎಂದರು.
ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಉನ್ನತ ತನಿಖೆ ನಡೆಸುವ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಬೇಕು. ಅಂತೆಯೇ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸುತ್ತಮುತ್ತಲ ಪ್ರದೇಶದಲ್ಲಿ ಯಾವ್ಯಾವ ಚಟುವಟಿಕೆ ನಡೆಯುತ್ತಿದೆ ಎಂಬುದರ ಬಗ್ಗೆ ಗಮನಹರಿಸಬೇಕು. ಸುತ್ತಲು ಬೆಳೆ ಇರುವ ಜಮೀನು ಮಧ್ಯಭಾಗದ ಆಲೆಮನೆಯ ಕೊಠಡಿಯಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಮಾಡುವ ಜಾಲ ಬೇರೂರಿದೆ. ಇದು ಘೋರ ಅಪರಾಧ. ಕರಾಳ ದಂಧೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಆಯೋಗದ ಸದಸ್ಯ ವೆಂಕಟೇಶ್, ಡಾ.ಬೆಟ್ಟಸ್ವಾಮಿ ಇತರರಿದ್ದರು.