

ಮಂಡ್ಯ: ಮಗು ತಾಯಿಯ ಗರ್ಭದಲ್ಲಿರುವಾಗಲೇ ಹಲವು ಹಕ್ಕುಗಳನ್ನು ಹೊಂದಿರುತ್ತಾರೆ. ಅದೇ ರೀತಿ ಬೆಳೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಯಾವುದೇ ತೊಂದರೆಯಾಗಬಾರದೆಂದು ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯವಿವಾಹ ನಿಷೇಧ ಕಾಯ್ದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಕಾಯ್ದೆ ಕಟ್ಟುನಿಟ್ಟಾಗಿ ಪಾಲನೆಯಾದರೆ ಮಕ್ಕಳು ಸುರಕ್ಷಿತವಾಗಿ ಬೆಳೆಯುತ್ತಾರೆ ಎಂದರು.
1773ರಲ್ಲಿ ವಾರನ್ ಹೇಸ್ಟಿಂಗ್ ಅವರು ರೆಗ್ಯುಲೇಟಿಂಗ್ ಕಾಯ್ದೆ ಜಾರಿಗೆ ತಂದರು. ಅಲ್ಲಿಂದ ಮಕ್ಕಳ ಬಗ್ಗೆ ಚಿಂತನೆಗಳು ಪ್ರಾರಂಭವಾಯಿತು. ತದನಂತರ ಮಕ್ಕಳ ರಕ್ಷಣೆಗಾಗಿ 1935ರವರೆಗೆ 8 ರಿಂದ 10 ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಶಿವಕಾಶಿಯಲ್ಲಿ ದೀಪಾವಳಿ ಹಬ್ಬ ಹತ್ತಿರ ಬರುತ್ತಿದಂತೆ ಮಕ್ಕಳು ಶಾಲೆಗೆ ಬರುವುದನ್ನು ನಿಲ್ಲಿಸಿ ಪಟಕಿ ತಯಾರಿಕೆ ಕೆಲಸಕ್ಕೆ ಹೋಗುತ್ತಿದ್ದರು. ಕೋಲ್ಕತ್ತಾದಲ್ಲಿ ಕಸೂತಿ ತಯಾರಿಕೆಗೆ ಸಣ್ಣ ಮಕ್ಕಳನ್ನು ತೊಡಗಿಸಿಕೊಳ್ಳುತ್ತಿದ್ದರು. ಇದನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ವಿಶೇಷ ಕಾಳಜಿ ವಹಿಸಿ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಮಕ್ಕಳು ಸಂಸ್ಕಾರ ಬೆಳೆಯುತ್ತದೆ. ಸಂಸ್ಕಾರ ಇದ್ದ ಕಡೆ ಶೋಷಣೆಗಳು ಇರುವುದಿಲ್ಲ ಎಂದು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಮಾತನಾಡಿ, ಮಕ್ಕಳನ್ನು ಬಲಿಕೊಟ್ಟು ಯಾವ ದೇಶಕಟ್ಟಲು ಸಾಧ್ಯವಿಲ್ಲ. ರಾಷ್ಟ್ರ ಕಟ್ಟಬೇಕಾದರೆ ಮಕ್ಕಳು, ಪರಿಸರ ಮತ್ತು ನೀರು ಇವುಗಳು ಅವಶ್ಯಕ. ಹಾಗಾಗಿ ಸಾರ್ವಜನಿಕರು, ಅಧಿಕಾರಿಗಳು ಇವುಗಳ ಮೇಲೆ ವಿಶೇಷ ಕಾಳಜಿವಹಿಸಲಿ. ಹೆಣ್ಣು ಭ್ರೂಣಹತ್ಯೆ ಹಾಗೂ ಬಾಲ್ಯವಿವಾಹಗಳು ಸಮಾಜ ಘಾತುಕ ಕೆಲಸಗಳು. ಇಂತಹ ಕೃತ್ಯ ಎಸಗುವವರ ವಿರುದ್ಧ ಅಧಿಕಾರಿಗಳು ಮುಲಾಜಿಲ್ಲದೇ ಪ್ರಕರಣ ದಾಖಲಿಸಬೇಕು. ಬಾಲ್ಯವಿವಾಹಗಳು ನಡೆಯದಂತೆ ಜಿಲ್ಲೆ, ತಾಲೂಕು ಮತ್ತು ಗ್ರಾಮಮಟ್ಟದಲ್ಲಿ ಅರಿವು ಮೂಡಿಸಬೇಕು. ಗ್ರಾಮ ಮಟ್ಟದಲ್ಲಿ ಗ್ರಾಮಲೆಕ್ಕಾಧಿಕಾರಿ, ಪಿಡಿಒ ವಿಶೇಷವಾಗಿ ಶಾಲೆಯ ಮುಖ್ಯೋಪಾಧ್ಯಾಯರು ಒಂದು ವಾರ ಹೆಣ್ಣು ಮಗು ಶಾಲೆಗೆ ಬರಲಿಲ್ಲ ಎಂದರೆ, ಅಂತಹವರನ್ನು ಹುಡುಕಿ ಕಾರಣ ಕೇಳಿ ಶಾಲೆಗೆ ಕರೆತನ್ನಿ. ಇಂತಹ ಸಂದರ್ಭದಲ್ಲಿ ಬಾಲ್ಯವಿವಾಹ ಮಾಡುವುದಕ್ಕೆ ಸಜ್ಜಾಗಿದ್ದರೆ ಪಾಲಕರಿಗೆ ತಿಳಿಹೇಳಿ. ಆ ಹೆಣ್ಣು ಮಗುವಿಗೆ ವಿಶೇಷ ಕೌನ್ಸಿಲ್ ನೀಡಿ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡಿ ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್ ಮಾತನಾಡಿ, ಬಾಲ್ಯವಿವಾಹ ತಡೆಗಟ್ಟವುದು ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು. ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟುವುದು ಮತ್ತು ಬಾಲ ಕಾರ್ಮಿಕರನ್ನು ತಡೆಗಟ್ಟುವುದು ಇಂತಹ ಹಲವಾರು ಕಾರ್ಯಕ್ರಮವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡು ಬಂದು ಹಲವಾರು ಮಕ್ಕಳನ್ನು ರಕ್ಷಣೆ ಮಾಡಿದ್ದೇವೆ ಎಂದು ವಿವರಿಸಿದರು.
ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕರ ಮಕ್ಕಳ ಮುಂದಿನ ಭವಿಷ್ಯ ಸರಿಪಡಿಸುವುದು ಕಾನೂನಿನ ಕರ್ತವ್ಯ. ಅತಿಮುಖ್ಯವಾಗಿ ಮಕ್ಕಳಲ್ಲಿ ಇಂತಹ ಚಟುವಟಿಕೆಯಿಂದ ತಡೆಗಟ್ಟಲು ಪ್ರತಿ ಹಳ್ಳಿಗಳಲ್ಲಿಯೂ ಅರಿವು ಮೂಡಿಸುವ ಕೆಲಸವಾಗಬೇಕು. ಈ ಮೂಲಕ ಜಿಲ್ಲೆಯಲ್ಲಿ ಮಾದರಿ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾಯ್ದೆಗಿಂತ ಹೃದಯವಂತಿಕೆ ದೊಡ್ಡದು
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು ಇರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾರ್ಯಾಗಾರ ಆಯೋಜಿಸಲಾಗಿದೆ. ಗ್ರಾಮಮಟ್ಟದಲ್ಲಿಯೇ ಬಾಲ್ಯವಿವಾಹ ತಡೆಗಟ್ಟಲು ಎಲ್ಲರೂ ಸಹಕರಿಸಿ. ಬಾಲ್ಯವಿವಾಹ ಸಾಮಾಜಿಕ ಪಿಡುಗಾಗಿದೆ. ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಪಿಡುಗನ್ನು ಹೋಗಲಾಡಿಸಬೇಕು. ಜಿಲ್ಲೆಯಲ್ಲಿ ಜನರು ತಾಂತ್ರಿಕ, ವೈಜ್ಞಾನಿಕ, ಶೈಕ್ಷಣಿಕವಾಗಿ ಮುಂದಿದ್ದಾರೆ. ಆದರೆ ಇಷ್ಟೆಲ್ಲ ಇದ್ದರೂ ಬಾಲ್ಯವಿವಾಹ ಹೆಚ್ಚಿದೆ ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಕಾನೂನಿನಲ್ಲಿ ಕಾಯ್ದೆಯಿದೆ. ಆದರೆ ಕಾಯ್ದೆಗಿಂತ ಹೃದಯವಂತಿಕೆ ಬಹಳ ದೊಡ್ಡದು. ಎಲ್ಲವನ್ನೂ ಕೂಡ ಕಾಯ್ದೆ ಮುಖಾಂತರ ನಿಯಂತ್ರಣ ಮಾಡುತ್ತೇವೆ ಎಂದರೆ ಆಗಲ್ಲ. ಹಾಗಾಗಿ ಮಾನವೀಯತೆಯಿಂದ ನಾವುಗಳು ಕೈಜೋಡಿಸಿ ಬಾಲ್ಯವಿವಾಹ ತಡೆಗಟ್ಟಲು ಶ್ರಮಿಸಬೇಕಿದೆ. ಬಾಲ್ಯವಿವಾಹ ತಡೆಗಟ್ಟಿದ ನಂತರ ಪ್ರಕರಣಕ್ಕೆ ಕಾರಣ ಹುಡುಕಿ ಅಧ್ಯಾಯನ ಮಾಡಿದಾಗ ಮಾತ್ರ ಮೂಲದಿಂದಲೇ ಬಾಲ್ಯವಿವಾಹ ತಡೆಯಲು ಸಾಧ್ಯ. ಮಹಿಳಾ ಸಬಲೀಕರಣ ಭಾಷಣ, ಬರಹಕ್ಕೆ ಸೀಮಿತವಾಗಬಾರದು. ಹೆಣ್ಣು ಕೂಡ ಪುರುಷನಂತೆ ಸಮಾನರೆಂದು ಪರಿಗಣಿಸಬೇಕು. ಇಡೀ ಜಗತ್ತನ್ನು ಬೆಳಗುವ ದೀಪ ಹೆಣ್ಣು. ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ ಬೇಕು. ಆದರೆ ಮಗಳಾಗಿ ಬೇಡ ಎನ್ನುವ ಮನಸ್ಥಿತಿ ಬದಲಾಗಬೇಕು. ಮಹಿಳಾ ಸಬಲೀಕರಣಕ್ಕೆ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡೋಣ ಎಂದು ಹೇಳಿದರು.
ಹೈಕೋರ್ಟ್ ಹಿರಿಯ ಸಿವಿಲ್ ನ್ಯಾಯಾಧೀಶ ಗಣಪತಿ ಪ್ರಶಾಂತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ವಾಣಿ ಎ.ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ರಾಜ್ಯ ಮಕ್ಕಳ ಆಯೋಗದ ಸದಸ್ಯ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಮೂರ್ತಿ ಇತರರಿದ್ದರು.