

ಯಲಬುರ್ಗಾ: ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ತಾಲೂಕಿನ ಹಿರೇಅರಳಿಹಳ್ಳಿ ಗ್ರಾಪಂನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ ರಚನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರ ಸಮಿತಿ ರಚನೆ, ಜವಾಬ್ದಾರಿ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಮಹಿಳೆ ಮತ್ತು ಮಕ್ಕಳ ಪರವಾಗಿರುವ ಕಾನೂನುಗಳ ಕುರಿತು ಗ್ರಾಪಂಗಳ ಜವಾಬ್ದಾರಿ ಮಹತ್ತರವಾಗಿದೆ. ಬಾಲ್ಯ ವಿವಾಹ, ಶಾಲೆಯಿಂದ ಹೊರಗುಳಿಯದಂತೆ, ಮಹಿಳೆ ಮತ್ತು ಮಕ್ಕಳ ಸಾಗಣೆ ಬಗ್ಗೆ ಎಚ್ಚರಿಕೆ ವಹಿಸುವಂಥ ಪ್ರಮುಖ ಜವಾಬ್ದಾರಿ ಕಾವಲು ಸಮಿತಿ ಮೇಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ, ಚರ್ಚಿಸಲಾದ ಸಮಸ್ಯೆಗಳು ಹಾಗೂ ಸಲಹೆ ಸೂಚನೆಗಳ ಬಗ್ಗೆ ಕ್ರಮ ವಹಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ದೇವಮ್ಮ ಭೂತಲ್, ಪಿಡಿಒ ಸೋಮಪ್ಪ ಪೂಜಾರ ಸಿಬ್ಬಂದಿ ಸಂಗಯ್ಯ ಹಿರೇಮಠ, ಶೇಖರ ವಾದಿ, ಗಂಗಮ್ಮ ಹಾಗೂ ಗ್ರಾಪಂ ಸದಸ್ಯರು, ಸಮಿತಿಯ ಪದಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಸೇರಿದಂತೆ ಇತರರಿದ್ದರು.
ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಹಾಗೂ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ, ಪೋಕ್ಸೋ ಕಾಯ್ದೆಗಳ ಕುರಿತು ಅರಿವು ಮೂಡಿಸುವುದು, ಸಹಾಯವಾಣಿ ಬಗ್ಗೆ ಮಕ್ಕಳಿಗೆ ಸಮರ್ಪಕ ಮಾಹಿತಿ ನೀಡುವುದರ ಮೂಲಕ ಮಕ್ಕಳ ಹಕ್ಕುಗಳ ಜವಾಬ್ದಾರಿ ವಹಿಸಬೇಕಿದೆ.ಶೇಖರಗೌಡ ರಾಮತ್ನಾಳ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ