ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳನ್ನು ಗೌರವಿಸಿ

12-MAR-GPT-1
Published on

 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಸಲಹೆ

 ಗುಂಡ್ಲುಪೇಟೆ : ಸಂವಿಧಾನ ಪುರುಷ ಮಹಿಳೆ, ಮೇಲು ಕೀಳು ಎಂಬ ಬೇಧಭಾವವಿಲ್ಲದೆ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಹೇಳಿದರು.

ಬುಧವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಬಾಲ್ಯ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಬಗ್ಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನಿನ ಅರಿವಿನ ಕೊರತೆಯಿಂದ ತಪ್ಪಾಗಿದೆ ಎಂದರೆ ಕಾನೂನಿನಲ್ಲಿ ಕ್ಷಮೆ ದೊರಕುವುದಿಲ್ಲ. ಅಲ್ಲದೆ ಯಾವುದೇ ಕಾನೂನಿನ ತಿದ್ದುಪಡಿ ಮಾಡಿದರೂ ಸಹ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಸಂವಿಧಾನ ಪ್ರತಿಯೊಬ್ಬರಿಗೂ ಮೂಲ ಹಕ್ಕುಗಳು ಹಾಗೂ ಕರ್ತವ್ಯವನ್ನು ಸ್ಪಷ್ಟಪಡಿಸಿದೆ. ಆದರೆ ಸಮಾಜದಲ್ಲಿ ಮಕ್ಕಳ ಹಕ್ಕುಗಳಿಗೆ ಧಕ್ಕೆಯುಂಟಾಗುತ್ತಿದ್ದ ಹಿನ್ನೆಲೆಯಲ್ಲಿ 2014ರಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಕಾಯ್ದೆಗಳನ್ನು ತರಲಾಗಿದೆ. ಮಕ್ಕಳು ಎಲ್ಲರಂತೆ ಸ್ವತಂತ್ರವಾಗಿ ಬದುಕುವುದು, ವಿದ್ಯಾಭ್ಯಾಸ ಪಡೆದುಕೊಳ್ಳಲು ಹಾಗೂ ಕ್ರೀಡೆ ಮುಂತಾದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವ, ಲೈಂಗಿಕ, ದೈಹಿಕ ಹಾಗೂ ಮಾನಸಿಕ ಶೋಷಣೆಗಳಿಂದ ರಕ್ಷಿಸಲು ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳನ್ನು ಗೌರವಿಸುವ ಮೂಲಕ ಬಾಲ್ಯ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ದತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಪಾಲನೆ ಮಾಡಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ನಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ತಳವಾರ್ ಮಾತನಾಡಿ, ಸದೃಢ ದೇಶ ನಿರ್ಮಾಣಕ್ಕೆ ಬಲಿಷ್ಠ ಯುವಜನಾಂಗದ ಅಗತ್ಯವಿದ್ದು ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿರುವುದರಿಂದ ಮಕ್ಕಳ ಸಮಗ್ರ ಬೆಳವಣಿಗೆಗೆ ಪಾಲಕರು ನೆರವಾಗಬೇಕು. ಕಾರ್ಮಿಕರ ಕೊರತೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಮಕ್ಕಳನ್ನು ಶಾಲೆಗಳಿಗೆ ಕಳಿಸದೆ ಕೆಲಸಕಾರ್ಯಗಳಿಗೆ ಬಳಸಿಕೊಳ್ಳುವುದು ಕಂಡುಬರುತ್ತಿದೆ. ಮಕ್ಕಳ ಹಿತಾಸಕ್ತಿಗೆ ವಿರುದ್ದವಾಗಿ ಅಪ್ರಾಪ್ತರಿಂದ ಕೆಲಸ ಮಾಡಿಸುವ, ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವವರ ವಿರುದ್ದ ಕಾನೂಕು ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಸವಿತಾ, ತಾಲೂಕು ಕಾರ್ಮಿಕ ನಿರೀಕ್ಷಕ ನಾರಾಯಣಸ್ವಾಮಿ, ತಹಸೀಲ್ದಾರ್ ಟಿ.ರಮೇಶ್ ಬಾಬು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಷಣ್ಮುಗ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net