

ಮಂಡ್ಯ: ಹದಿನೆಂಟು ವರ್ಷದೊಳಗಿನವರು ಚಾಲನೆ ಮಾಡುವುದು ಕಂಡುಬಂದರೆ ವಾಹನದ ಮಾಲೀಕ ಹಾಗೂ ಪಾಲಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆರ್‌ಟಿಇ-2009, ಪೋಕ್ಸೋ-2012, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಕಳ್ಳ ಸಾಗಾಟ, ಪಿಸಿಪಿಎನ್‌ಡಿಟಿ ಹಾಗೂ ಬಾಲ ನ್ಯಾಯ ಕಾಯ್ದೆ-2015ರ ಅನುಷ್ಠಾನ ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಯೋಜನೆ ಕುರಿತು ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸ್ತೆ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಶಾಲಾ ಆವರಣ, ಶ್ರಮಿಕನಗರ, ಗ್ರಾಮೀಣ ಭಾಗದ ಕೆಲ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಪರಿಣಾಮ ಹದಿಹರೆಯದ ಮಕ್ಕಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಅಧಿಕಾರಿಗಳು ಅನುಮಾನಾಸ್ಪದ ಜಾಗಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಿ. ಇನ್ನೂ ಒಂದು ವಾರದಲ್ಲಿ ಎಷ್ಟು ಕಡೆ ಪತ್ತೆ ಹಚ್ಚಲಾಗಿದೆ ಎನ್ನುವ ವರದಿಯನ್ನು ಆಯೋಗಕ್ಕೆ ನೀಡಿ ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಪೊಕ್ಸೋ ಪ್ರಕರಣಗಳನ್ನು ದಾಖಲು ಮಾಡಲು ವಿಳಂಬ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪೊಕ್ಸೋ ಪ್ರಕರಣ ದಾಖಲು ಮಾಡಲು ಪೊಲೀಸರು ವಿಳಂಬ ಮಾಡಬಾರದು. ಅಪ್ರಾಪ್ತೆಯರು ಗರ್ಭಿಣಿಯಾದ ಪ್ರಕರಣದಲ್ಲಿ ಆಯಾ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ. ಎಲ್ಲ ಶಾಲೆಯಲ್ಲೂ ಮಕ್ಕಳಿಗೆ ಅವರ ರಕ್ಷಣೆಯ ಕುರಿತಾಗಿ ತಿಳಿಸಬೇಕು. ಶಾಲೆಯ ವಾಹನವನ್ನು ಚಲಾಯಿಸುವ ಚಾಲಕನ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು. ಶಾಲಾ ವಾಹನಗಳಲ್ಲಿ ಸಿಸಿ ಕ್ಯಾಮೆರಾ ಇರಿಸಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಯಲ್ಲಿ ಸಹಾಯವಾಣಿ ಸಂಖ್ಯೆಯ ಫಲಕವನ್ನು ಅಳವಡಿಸಿರಬೇಕು. ಜತೆಗೆ ಸಲಹಾ ಪೆಟ್ಟಿಗೆ ಇಡಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಶುಲ್ಕ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ. ಯಾವುದೇ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಶಾಲಾ ಶುಲ್ಕ ಪಾವತಿಸಲು ಮಾನಸಿಕ ಒತ್ತಡ ಹೇರಿದರೆ ಅಂತಹ ಶಿಕ್ಷಣ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದರು.
ಸಮಾಜದಲ್ಲಿ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ರಸ್ತೆ ಸುರಕ್ಷತೆಯ ಕುರಿತಾಗಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಖಾಸಗಿ ಶಾಲೆಗೆ ಸಂಬಂಧಿಸಿದಂತೆ ಆಟೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಕರೆದುಕೊಂಡು ಹೋಗುತ್ತಿರುವು ಗಮನಕ್ಕೆ ಬಂದಿದೆ. ಅಧಿಕಾರಿಗಳು ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಆಟೋ ಟ್ಯಾಕ್ಸಿ ಮತ್ತು ಚಾಲಕರಿಗೆ ದಂಡ ವಿಧಿಸಿ ಸೂಕ್ತ ಕ್ರಮ ವಹಿಸಿ. ಏಪ್ರಿಲ್ನಿಂದ ಇಲ್ಲಿಯವರೆಗೆ 20 ಬಾಲಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ. ಆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಅಧಿಕಾರಿಗಳು ದಾಳಿ ನಡೆಸಿ ಎಲ್ಲೆಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆಯೋ ಅಂತಹ ಸಂಸ್ಥೆ ಹಾಗೂ ಮಾಲೀಕರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಿ. ಹೊರ ರಾಜ್ಯಗಳಿಂದ ಬಂದು ನೆಲೆಸಿರುವ ಅಲೆಮಾರಿಗಳ ಮಕ್ಕಳ ಶಿಕ್ಷಣದ ಕುರಿತು ಅಧಿಕಾರಿಗಳು ಮುತುವರ್ಜಿ ವಹಿಸಿ ಎಂದು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಅಧಿಕಾರಿಗಳು ಮಕ್ಕಳ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಸರಿಯಾದ ರಕ್ಷಣೆ, ಶಿಕ್ಷಣ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಕೊಟ್ಟಾಗ ಮಾತ್ರ ಸಮಾಜವನ್ನು ಸ್ವಚ್ಛಂದವಾಗಿ ನಿರ್ಮಿಸಲು ಸಾಧ್ಯ. ಅಧಿಕಾರಿಗಳು, ತಮ್ಮ ಮಕ್ಕಳು ಎಂಬ ಮನೋಭಾವನೆಯಿಂದ ನೋಡಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಮಾತನಾಡಿ, ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ. ಯಾವುದೇ ಸರ್ಕಾರ ಬಂದರೂ ಸಹ ಮಕ್ಕಳ ಮೇಲೆ ವಿಶೇಷವಾದ ಕಾಳಜಿ ವಹಿಸುತ್ತದೆ. ಅಧಿಕಾರಿಗಳು ಸಮನ್ವಯ ಸಾಧಿಸಿ ಮಕ್ಕಳಿಗೆ ಸೌಲಭ್ಯವನ್ನು ಕಲ್ಪಿಸಬೇಕು. ಎಲ್ಲ ಅಧಿಕಾರಿಗಳು ಸಾಮಾಜಿಕ ಜವಾಬ್ದಾರಿಯನ್ನು ಸಾಧಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ-2 ಲಕ್ಷ್ಮೀ, ತಹಸೀಲ್ದಾರ್ ವಿಶ್ವನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಸೋಮಶೇಖರ್ ಇತರರಿದ್ದರು.
ಭ್ರೂಣ ಹತ್ಯೆಗೆ ಅಧಿಕಾರಿಗಳ ಕಡಿವಾಣ
ಜಿಲೆಯಲ್ಲಿ ಭ್ರೂಣ ಹತ್ಯೆಯ ದೊಡ್ಡ ಜಾಲವೇ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಇದರಿಂದಾಗಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಮತ್ತೆ ಯಾರಾದರೂ ಇಂತಹ ಕೃತ್ಯಕ್ಕೆ ಮುಂದಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಕೆ.ನಾಗಣ್ಣಗೌಡ ಸೂಚನೆ ನೀಡಿದರು.
ಜಿಲ್ಲಾಸ್ಪತ್ರೆಯ ವಾರ್ಡ್‌ಗಳಿಗೆ ಆಹಾರ ಪಟ್ಟಿ ಅಳವಡಿಸಿ. ನಾಯಿ ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಕಡ್ಡಾಯವಾಗಿ ಔಷಧ ಇರಬೇಕು. ಗರ್ಭಿಣಿಯರಿಗೆ ಪೌಷ್ಟಿಕಾಂಶ ಪದಾರ್ಥಗಳನ್ನು ಸರಿಯಾದ ಸಮಯಕ್ಕೆ ನೀಡಬೇಕು. ತಾಯಿ ಸದೃಢವಾಗಿದ್ದರೆ ಮಾತ್ರ ಮಗು ಆರೋಗ್ಯಯುತವಾಗಿ ಇರಲು ಸಾಧ್ಯ ಎಂದು ಹೇಳಿದರು.
ಪೊಲೀಸ್ ಪರಿಶೀಲನೆ ನಂತರವೇ ನೇಮಕ
ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಮಕ್ಕಳ ಹಾಸ್ಟೆಲ್ಗಳಲ್ಲಿ ಸಲಹಾ ಪೆಟ್ಟಿಗೆ ಇಡಬೇಕು. ಜತೆಗೆ ಕಿಟ್‌ಗಳನ್ನು ಸರಿಯಾಗಿ ವಿತರಿಸಬೇಕು. ಹೆಣ್ಣು ಮಕ್ಕಳಿಗೆ ಸೂಕ್ತ ಸಮಯಕ್ಕೆ ಪ್ಯಾಡ್ ನೀಡಬೇಕು. ಕೆಲ ಹಾಸ್ಟೆಲ್‌ನಲ್ಲಿ ಸಿಬ್ಬಂದಿ ಹೆಣ್ಣು ಮಕ್ಕಳನ್ನು ತುಚ್ಯವಾಗಿ ನಿಂದಿಸಿರುವುದು ಕಂಡು ಬಂದಿದೆ. ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ. ಪ್ಯಾಡ್ ವಿಲೇವಾರಿ ಮಾಡಲು ಬರ್ನಿಂಗ್ ಮಿಷನ್ ಬಳಸಿ. ಹೆಣ್ಣು ಮಕ್ಕಳ ಹಾಸ್ಟೆಲ್ನಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಪೊಲೀಸ್ ಪರಿಶೀಲನೆ ಮಾಡಿದ ನಂತರವೇ ನೇಮಿಸಿಕೊಳ್ಳಬೇಕು. ಪ್ರಾಯೋಜಕತ್ವ ಯೋಜನೆಯಡಿ ಪಾಲಕರಿಲ್ಲದ 18 ವರ್ಷದೊಳಗಿನ ಮಕ್ಕಳಿಗೆ 3 ವರ್ಷ ತಿಂಗಳಿಗೆ ನಾಲ್ಕು ಸಾವಿರ ರೂ ನೀಡಲಾಗುವುದು. ಈ ಯೋಜನೆಯಡಿ 514 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.